ಬೆಳಗಾವಿ ಸುವರ್ಣ ವಿಧಾನಸೌಧ :ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2022-23 ರಿಂದ 2024-25ನೇ ಸಾಲಿನವರೆಗೆ ಒಟ್ಟು 13,728 ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 945 ರೈತರಿಗೆ ವಿವಿಧ ಕಾರಣಗಳಿಂದ ಬೆಳೆ ವಿಮೆ ಪರಿಹಾರ ಜಮೆಯಾಗಿರುವುದಿಲ್ಲ. ಸಮಸ್ಯೆಗಳನ್ನು ಪರಿಹರಿಸಿ ಸರ್ಕಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದುರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬುಧವಾರ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಬೆಳೆವಿಮೆ ಪರಿಹಾರ ಬಾಕಿ ಇರುವ 945 ರೈತರ ಪೈಕಿ ಎನ್.ಪಿ.ಸಿ.ಐ ಸೀಡಿಂಗ್, ಆಧಾರ್ ಕಾರ್ಡ್ ನಿಷ್ಕ್ರೀಯತೆ, ಅಮಾನ್ಯವಾದ ಬ್ಯಾಂಕ್ ಖಾತೆ ಸೇರಿದಂತೆ ತಾಂತ್ರಿಕ ಕಾರಣಗಳಿಂದಾಗಿ ಒಟ್ಟು 133 ರೈತರಿಗೆ ರೂ.40.09 ಲಕ್ಷ ಪರಿಹಾರ ಹಣ ಜಮೆಯಾಗದೆ ಹಿಂದಿರುಗಿದೆ. ಬೆಳೆÀ ಕಟಾವು ಇಳುವರಿ ಪ್ರಯೋಗ ವ್ಯತ್ಯಾಸದ ಹಿನ್ನಲೆಯಲ್ಲಿ 798 ಬೆಳೆ ಹೊಂದಾಣಿಕೆಯಾಗದೇ ಹಾಗೂ ಮಾರ್ಗಸೂಚಿಯನುಸಾರ ಬೆಳೆ ಕಟಾವು ಪ್ರಯೋಗಗಳ ಇಳುವರಿ ಲಭ್ಯವಿಲ್ಲದ ಕಾರಣ 14 ರೈತರಿಗೆ ಪರಿಹಾರ ಪಾವತಿ ಬಾಕಿಯಿದೆ. 2025-26ರ ಮುಂಗಾರು ಹಂಗಾಮಿನಲ್ಲಿ ಮಿಮೆ ಮಾಡಿಸುವ ರೈತರ ಸಂಖ್ಯೆ ಹೆಚ್ಚಾಗಿದ್ದು, ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 10,054 ರೈತರು ನೋಂದಾಯಿಸಿಕೊಂಡಿದ್ದಾರೆ. ಮಧ್ಯಂತರ ಬೆಳೆ ವಿಮೆ ನಷ್ಟ ಪರಿಹಾರದಡಿ ಒಟ್ಟು 9861 ರೈತರಿಗೆ ರೂ.906.32 ಲಕ್ಷಗಳ ಬೆಳೆ ವಿಮೆ ಪರಿಹಾರ ಲೆಕ್ಕಾಚಾರ ಮಾಡಲಾಗಿದ್ದು, ವಿಮಾ ಸಂಸ್ಥೆಯವರಿಂದ ಪರಿಹಾರ ಇತ್ಯರ್ಥ ಪ್ರಕ್ರಿಯೆಯಲ್ಲಿದೆ. ಕಲಬುರಗಿ ಜಿಲ್ಲೆಗೆ ಮಧ್ಯಂತರ ಬೆಳೆ ವಿಮೆ ನಷ್ಟ ಪರಿಹಾರದಡಿ ರೂ.990 ಕೋಟಿ ಪರಿಹಾರವನ್ನು ನೀಡಲಾಗಿದೆ. ರಾಜ್ಯದ ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ರೈತರಿಗೆ ಬೆಳೆಮಿಮೆ ನೊಂದಣಿಗೆ ಪ್ರೋತ್ಸಾಹಿಸಬೇಕು. ಇದರಿಂದ ರೈತರಿಗೆ ಯಾವುದೇ ನಷ್ಟವಿಲ್ಲ. ವಿಮೆ ಮೊತ್ತ ಶೇ.2 ರಷ್ಟು ಮಾತ್ರ ರೈತರು ಪಾವತಿಸಬೇಕು. ಉಳಿದ ಬೆಳೆವಿಮೆ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ನೋಂದಣಿಯಿಂದ ಪ್ರಾರಂಭವಾಗಿ ಪರಿಹಾರ ವಿತರಣೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಸಂರಕ್ಷಣೆ ಪೋರ್ಟಲ್ ಮೂಲಕವೇ ನಿರ್ವಹಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
***
ನರೇಗಾ ಯೋಜನೆಯಡಿ ತಡೆಗೋಡೆ ನಿರ್ಮಾಣಕ್ಕೆ ನಿರ್ಬಂಧವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಬೆಳಗಾವಿ ಸುವರ್ಣ ವಿಧಾನಸೌಧ ಡಿ.10. (ಕ.ವಾ.): -ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ (ನರೇಗಾ) ಯೋಜನೆಯಡಿ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಯಾವುದೇ ನಿಬರ್ಂಧ ಇರುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಅವರು ಮಾತನಾಡಿದರು.
ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಅವರು, ನರೇಗಾ ಯೋಜನೆಯಡಿ ಕ್ರಿಯಾ ಯೋಜನೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದು, ಈ ಕುರಿತಂತೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕೋರಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿ, ನರೇಗಾ ಯೋಜನೆಯಡಿ ಅನುಮತಿಸಿದ ಕಾಮಗಾರಿಗಳಲ್ಲಿ ಸಮುದಾಯ ಆಧಾರಿತ ಉದ್ದೇಶಕ್ಕಾಗಿ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ರೀತಿಯ ಕಾಮಗಾರಿಗಳನ್ನು ನಿಯಮಾನುಸಾರ ಗ್ರಾಮ ಪಂಚಾಯತಿಯ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಂಡು ಅನುಷ್ಠಾನಗೊಳಿಸಬಹುದಾಗಿದೆ. ಒಂದು ವೇಳೆ ಸ್ಥಳೀಯ ಅಧಿಕಾರಿಗಳು ಆ ರೀತಿ ತಪ್ಪು ಮಾಹಿತಿ ನೀಡಿದ್ದರೆ, ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ನರೇಗಾದಡಿ ಸಾಮಗ್ರಿ ವೆಚ್ಚಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಅನುದಾನ ಬಂದಿಲ್ಲ, ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಸಲ್ಲಿಸಲಾಗಿದೆ. ಅದೇ ರೀತಿ 15 ನೇ ಹಣಕಾಸು ಆಯೋಗದಲ್ಲಿಯೂ ರಾಜ್ಯಕ್ಕೆ ಸುಮಾರು 2,500 ಕೋಟಿ ರೂ. ಅನುದಾನ ಬರಬೇಕಿದೆ, ಈ ಕುರಿತೂ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಅನುದಾನ ಬಂದ ಬಳಿಕ ಗ್ರಾಮ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
—-
ಪ.ಜಾತಿ, ಪ.ಪಂಗಡದ ಕಲಾವಿದರಿಗೆ ಪ್ರೋತ್ಸಾಹಿಸಲು ವಿಶೇಷ ಕಾರ್ಯಕ್ರಮಗಳ ಆಯೋಜನೆ- ಸಚಿವ ಶಿವರಾಜ್ ತಂಗಡಗಿ
ಬೆಳಗಾವಿ ಸುವರ್ಣ ವಿಧಾನಸೌಧ : – ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್ ತಂಗಡಗಿ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಅವರು ಮಾತನಾಡಿದರು.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಅಶ್ವತ್ಥ ನಾರಾಯಣ ಸಿ.ಎನ್. ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಶಿವರಾಜ ತಂಗಡಗಿ ಅವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಪ್ರಸ್ತುತ ಕಷ್ಟದ ಪರಿಸ್ಥಿತಿಯಲ್ಲಿರುವ 11,154 ಕಲಾವಿದರು, ಸಾಹಿತಿಗಳಿಗೆ ತಿಂಗಳಿಗೆ ರೂ. 2500 ರಂತೆ ಮಾಸಾಶನ ನೀಡಲಾಗುತ್ತಿದೆ. ಅಲ್ಲದೆ 410 ಜನ ಮೃತ ಕಲಾವಿದರ ಪತ್ನಿಯರಿಗೂ ಮಾಸಿಕ 500 ರೂ. ಮಾಸಾಶನ ಪಾವತಿಸಲಾಗುತ್ತಿದೆ. ಪ್ರಸಕ್ತ ವರ್ಷದ ನವೆಂಬರ್ ತಿಂಗಳಿನವರೆಗೂ ಮಾಸಾಶನ ಪಾವತಿಸಲಾಗಿದೆ. ಮಾಸಾಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ 1896 ಕಲಾವಿದರು, ಸಾಹಿತಿಗಳಿಗೂ ಕೂಡ ಮಾಸಾಶನ ಮಂಜೂರು ಮಾಡಲಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಈ ಹಿಂದೆ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಕಾರ್ಯಕ್ರಮಗಳನ್ನು ಏರ್ಪಡಿಸಿ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿತ್ತು, ಈ ಕಾರ್ಯಕ್ರಮವನ್ನು ಮುಂದುವರೆಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಶಿವರಾಜ್ ತಂಗಡಗಿ, ಜಾನಪದ ಜಾತ್ರೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿಲ್ಲ. ಈ ವರ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು, ಸ್ಥಳೀಯ ಕಲೆಗಳನ್ನು, ಉಳಿಸಿ ಬೆಳೆಸುವ ಉದ್ದೇಶದಿಂದ ಚಿತ್ರದುರ್ಗ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ದಿನಾಂಕಗಳನ್ನು ಶೀಘ್ರ ನಿಗದಿಪಡಿಸಲಾಗುವುದು ಎಂದರು. ಮಂಗಳೂರಿನಲ್ಲಿಯೂ ಕಾರ್ಯಕ್ರಮ ಆಯೋಜಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಮನವಿಗೆ ಸ್ಪಂದಿಸಿದ ಸಚಿವರು, ಮಂಗಳೂರಿನಲ್ಲಿಯೂ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಭರವಸೆ ನೀಡಿದರು.
**
ರಾಜ್ಯದಲ್ಲಿ 37,48,700 ವಸತಿ ರಹಿತರು: ಸಚಿವ ಜಮೀರ್ ಅಹಮದ್ ಖಾನ್
ಬೆಳಗಾವಿ ಸುವರ್ಣ ವಿಧಾನಸೌಧ : – ರಾಜ್ಯದಲ್ಲಿ 37,48,700 ವಸತಿ ರಹಿತರು ಇದ್ದಾರೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ. ಜಡ್. ಜಮೀರ್ ಅಹಮದ್ ಖಾನ್ ತಿಳಿಸಿದರು.
ಅವರು ವಿಧಾನ ಪರಿಷತ್ನಲ್ಲಿ ಸದಸ್ಯ ಶಿವಕುಮಾರ್ ಕೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2018ರಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ವಸತಿ/ನಿವೇಶನ ರಹಿತರ ಸಮೀಕ್ಷೆ ಹಾಗೂ 2017ರಲ್ಲಿ ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ ನಗರ ಪ್ರದೇಶದಲ್ಲಿ ವಸತಿ/ನಿವೇಶನ ರಹಿತರ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಈ ಸಮೀಕ್ಷೆ ಯಲ್ಲಿ ರಾಜ್ಯದಲ್ಲಿ ಒಟ್ಟು 37,48,766 ವಸತಿ ರಹಿತರು ಕಂಡು ಬಂದಿದ್ದು, ಇದರಲ್ಲಿ 17,31,633 ನಿವೇಶನ ರಹಿತರು ಮತ್ತು 20,17,133 ವಸತಿ ರಹಿತರು ಇದ್ದಾರೆ ಎಂದರು.
2024-2025ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಒಟ್ಟು 7,38,881 ಮನೆಗಳ ಗುರಿ ನೀಡಿದ್ದು, ಇವುಗಳಲ್ಲಿ 3,27,747 ಅನುಮೋದನೆಗೊಂಡಿರುತ್ತವೆ. 411134 ಮನೆಗಳು ಅನುಮೋದನೆಗೆ ಬಾಕಿಯಿವೆ ಎಂದರು.
ರಾಜ್ಯದಲ್ಲಿ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದವರಿಗೆ ರೂ. 4 ಲಕ್ಷ ಮತ್ತು ಸಾಮಾನ್ಯ ವರ್ಗದವರಿಗೆ ರೂ. 3.5 ಲಕ್ಷ ಕ್ಕೆ ಹೆಚ್ಚಳ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.
**
ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ
ಕಲ್ಪಿಸಲು ಟೆಂಡರ್ ಕರೆಯಲಾಗಿದೆ: ಜಮೀರ್ ಅಹ್ಮದ ಖಾನ್
ಬೆಳಗಾವಿ ಸುವರ್ಣಸೌಧ : ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 405 ವಸತಿ ನಿಲಯಗಳ ಪೈಕಿ ಅಗತ್ಯವಿರುವ ವಸತಿ ನಿಲಯಗಳಿಗೆ ಮಂಚ, ಹೊದಿಕೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಕ್ಕೆ ಟೆಂಡರ್ ಕರೆಯಲಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ಪರಿಷತ್ನಲ್ಲಿ ಡಿ.10ರಂದು ಶಾಸಕ ಬಲ್ಕೀಸ್ ಬಾನು ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 31(461)ರ ಮೇಲೆ ಮಾತನಾಡಿದ ಸಚಿವರು, ಇಲಾಖೆಯ ವಸತಿ ನಿಲಯಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯದ ವೃಂದ ಮತ್ತು ನೇಮಕಾತಿ ನಿಯಮಗಳು 2011ರ ಸಮಗ್ರ ಪರಿಷ್ಕರಣೆಯ ಪುಸ್ತಾವನೆಯು ಪರಿಶೀಲನೆಯಲ್ಲಿದ್ದು, ಈ ನಿಯಮಗಳು ಪರಿಷ್ಕರಣೆ ಆದ ನಂತರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮವಹಿಸಲಾಗುವುದು.
ಪ್ರಸ್ತುತ ವಿದ್ಯಾರ್ಥಿನಿಲಯಗಳ ಸುಗಮ ಕಾರ್ಯನಿರ್ವಹಣೆಗಾಗಿ ಹಾಗೂ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಖಾಲಿ ಇರುವ ನಿಲಯಪಾಲಕರ ಹುದ್ದೆಗಳಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೆಚ್ಚುವರಿ ಪ್ರಭಾರದ ವ್ಯವ್ಯಸ್ಥೆಯನ್ನು ತಾತ್ಕಾಲಿಕವಾಗಿ ಮಾಡಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
**
ಬಸವ ವಸತಿ ಯೋಜನೆಯ ಸಹಾಯಧನ ಹೆಚ್ಚಳಕ್ಕೆ ಸರ್ಕಾರದ ಚಿಂತನೆ:
ಸಚಿವ ಜಮೀರ್ ಅಹ್ಮದ್ ಖಾನ್
ಬೆಳಗಾವಿ ಸುವರ್ಣಸೌಧ.: ಬಸವ ವಸತಿ ಯೋಜನೆಗೆ ಈಗ ನೀಡುತ್ತಿರುವ ಸಹಾಯಧನವು ಯಾವುದಕ್ಕೂ ಸಾಕಾಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಲೇ ಇವೆ. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಕನಿಷ್ಠ 3 ರಿಂದ 4 ಲಕ್ಷ ರೂ.ವರೆಗಾದರೂ ಸಹಾಯಧನ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಪರಿಷತ್ನಲ್ಲಿ ಡಿ.10 ರಂದು ಸದಸ್ಯರಾದ ಪ್ರದೀಪ್ ಶೆಟ್ಟರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಲು ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಆದ್ದರಿಂದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಈಗ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ.
ಈ ಸಹಾಯಧನ ಹೆಚ್ಚಳ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಬರುವ ಬಜೆಟ್ನಲ್ಲಿ ಪರಿಗಣಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದರು.
ಪ್ರಸ್ತುತ ಕೇಂದ್ರ ಸರ್ಕಾರದ ವಸತಿ ಯೋಜನೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಸತಿ ಯೋಜನೆಗಳಡಿ ಅನುದಾನ ಬಿಡುಗಡೆ ಮಾಡಲು ಬಾಕಿ ಇರುವುದಿಲ್ಲ. 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಅಕ್ಟೋಬರ್-2025ರ ಅಂತ್ಯಕ್ಕೆ 1324.26 ರೂ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಭೂ ಪರಿವರ್ತನೆ ನಿಯಮಗಳ ಸರಳೀಕರಣ: ಸಚಿವ ಕೃಷ್ಣ ಬೈರೇಗೌಡ
ಬೆಳಗಾವಿ ಸುವರ್ಣಸೌಧ.: ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 95ರ ವಿವಿಧ ಉಪ-ಕಲಂಗಳಿಗೆ ತಿದ್ದುಪಡಿಯನ್ನು ಮಾಡಲಾಗಿದೆ. ಅದನ್ನು ಜಾರಿಗೆ ತರಲು ಈಗಾಗಲೇ ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ, ಅಭಿಪ್ರಾಯ ಹಾಗೂ ಸಲಹೆಯನ್ನು ಪಡೆದು ಸೂಕ್ತ ನಿಯಮಗಳನ್ನು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ರಾಮೋಜಿ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಪ್ರಸ್ತುತ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಲು ಕ್ರಮವಹಿಸಲಾಗುತ್ತಿರುವುದರಿಂದ ಜನತೆಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ.
ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 95ಕ್ಕೆ ಮಾಡಲಾದ ತಿದ್ದುಪಡಿಗಳಿಗೆ ಅನುಗುಣವಾಗಿ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ವಿವಿಧ ನಿಯಮಗಳಿಗೆ ತಿದ್ದುಪಡಿ ಮಾಡಲು ಸರ್ಕಾರವು ದಿನಾಂಕ: 17.09.2025 ರಂದು ಕರಡು ನಿಯಮಗಳ ಅಧಿಸೂಚನೆಯನ್ನು ಹೊರಡಿಸಿದ್ದು, ಶೀಘ್ರದಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದರು.
ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2 ಎಕರೆವರೆಗೆ ಭೂ ಪರಿವರ್ತನೆಯ ಅವಶ್ಯಕತೆ ಇಲ್ಲದೆ ನೇರವಾಗಿ ಪ್ಲಾನ್ ಮಾಡಿಸಿಕೊಳ್ಳಬಹುದಾಗಿದೆ ಹಾಗೂ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಪರಿವರ್ತನೆ ಅಗತ್ಯವಿಲ್ಲ ಮತ್ತು ಕಂದಾಯ ನ್ಯಾಯಾಲಯ ನಡೆಸುವ ಕುರಿತಂತೆ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
**
ಆರ್ಟಿಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಗೆ ಕ್ರಮ: ರಾಮಲಿಂಗಾರೆಡ್ಡಿ
—
ಬೆಳಗಾವಿ ಸುವರ್ಣಸೌಧ : ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡಿದರೆ ಆರ್ಟಿಓ ಕಚೇರಿಗಳ ಅಧಿಕಾರಿಗಳನ್ನೇ ಹೊಣೆಯಾಗಿಸಿ, ಶಿಸ್ತುಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿ ಕ್ರಮವಹಿಸಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಮೇಲ್ಮನೆಯಲ್ಲಿ ಡಿ.10ರಂದು ಸದಸ್ಯೆ ಡಾ.ಉಮಾಶ್ರೀ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 342ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಆರ್ಟಿಓ ಕಚೇರಿಗಳಲ್ಲಿ ಶಿಸ್ತು ತರಲು ಅನೇಕ ಕ್ರಮವಹಿಸಲಾಗಿದೆ. ಕಚೇರಿಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿ /ಸ್ವೀಕೃತಿಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಕಡ್ಡಾಯವಾಗಿ ವಹಿಗಳನ್ನು ವಿಷಯ ನಿರ್ವಾಹಕರು ನಿರ್ವಹಿಸುವುದು. ಅಧೀಕ್ಷಕರುಗಳು ಪ್ರತಿ ವಾರಕ್ಕೊಮ್ಮೆ ವಹಿಗಳನ್ನು ಪರಿಶೀಲಿಸುವುದು ಹಾಗೂ ತಿಂಗಳಿಗೊಮ್ಮೆ ಮೇಜು ತಪಾಸಣೆಯನ್ನು ನಡೆಸಿ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವಂತೆ ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.
ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಯಾವುದೇ ರೀತಿಯ ಅವಕಾಶ ಕಲ್ಪಿಸದಂತೆ ಕರ್ತವ್ಯ ನಿರ್ವಹಿಸುವಂತೆ ಒಂದು ವೇಳೆ ಯಾವುದೇ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಆಯಾ ಕಚೇರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದೇವೆ.
ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕಛೇರಿಯ ಅಧಿಕಾರಿ/ ಸಿಬ್ಬಂದಿಯವರನ್ನು ಭೇಟಿ ಮಾಡಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದು ಆರ್ಟಿಓ ಕಚೇರಿಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಲೋಕಾಯುಕ್ತರವರ ಕಚೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ವಿವರಗಳ ಮಾಹಿತಿಯನ್ನು ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗಿದೆ. ದಿನಾಂಕ 01-11-2021 ರಿಂದ ಸಾರಿಗೆ ಇಲಾಖೆಯಲ್ಲಿನ 52 ಸೇವೆಗಳನ್ನು ಆನ್ ಲೈನ್ ಮುಖಾಂತರ ಒದಗಿಸುತ್ತ ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ವಿಧಾನಸಭೆಯಲ್ಲಿ ವಿಧೇಯಕಗಳ ಮಂಡನೆ
ಬೆಳಗಾವಿ, ಸುವರ್ಣ ವಿಧಾನಸೌಧ : 2025ನೇ ಸಾಲಿನ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ ಮತ್ತು ನಿಯಂತ್ರಣ) ವಿಧೇಯಕವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ವಿಧೇಯಕದ ಪ್ರಸ್ತಾವವನ್ನು ಅಂಗೀಕರಿಸಲಾಯಿತು.
2025ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ ಹಾಗೂ 2025ನೇ ಸಾಲಿನ ಕರ್ನಾಟಕ ಸಿನಿ ಮತ್ತು ಸಾಂಸ್ಕøತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) (ತಿದ್ದುಪಡಿ) ವಿಧೇಯಕಗಳನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಡಿಸಿದರು. ವಿಧೇಯಕದ ಪ್ರಸ್ತಾವವು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, 2025ನೇ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಔಷಧ ಮತ್ತು ಪ್ರಸಾಧನ ಸಾಮಗ್ರಿ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ಎರಡನೇ ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃಧ್ಧಿ ಮಂಡಲಿ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಲಿ (ತಿದ್ದುಪಡಿ) ವಿಧೇಯಕಗಳನ್ನು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ವಿಧೇಯಕಗಳ ಪ್ರಸ್ತಾವವು ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
ವಿದ್ಯಾರ್ಥಿ ನಿಲಯಕ್ಕೆ ಹೊಸ ಕಟ್ಟಡ-ಸಚಿವ ಶಿವರಾಜ ಎಸ್ ತಂಗಡಗಿ
ಬೆಳಗಾವಿ, ಸುವರ್ಣ ವಿಧಾನಸೌಧ : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗದ ಹಿತದೃಷ್ಟಿಯಿಂದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣ ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣ ಅವರು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಉತ್ತಮ ವ್ಯಾಸಂಗದ ಹಿತದೃಷ್ಟಿಯಿಂದ ವಿದ್ಯಾರ್ಥಿ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡುವಂತೆ ಕೋರಿದ ಪ್ರಶ್ನೆಗೆ 2024-25ನೇ ಸಾಲಿನಲ್ಲಿ ಮಂಜೂರಾಗಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣವನ್ನು ಲೋಕೋಪಯೋಗಿ ಇಲಾಖೆ, ಹಾಸನ ಇವರ ಮೂಲಕ ಕೈಗೊಳ್ಳಲಾಗಿದೆ. ಈಗಾಗಲೇ 2.50ಕೋಟಿ ರೂ.ಗಳನ್ನು ಹಾಸನ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿರುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು ಆದಷ್ಟು ಶೀಘ್ರವಾಗಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಸದನದಲ್ಲಿ ಉತ್ತರಿಸಿದರು.
*****


