ಹಾವೇರಿ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿ ರಾಜಸ್ತಾನ ಮೂಲದ ಬಿಕಾರಾಮ ಎಂಬಾತನನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ.
ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಹಾವೇರಿ ಪೊಲೀಸರು ಕಾರ್ಯಚರಣೆ ನಡೆಸಿ ಬಿಕಾರಾಮನನ್ನು ಬಂಧಿಸಿದ್ದು, ಬಳಿಕ ಮುಂಬೈ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ರಾಜಸ್ತಾನ ಮೂಲದ ಬಿಕಾರಾಮ, ಒಂದೂವರೆ ತಿಂಗಳ ಹಿಂದೆ ಹಾವೇರಿಗೆ ಬಂದಿದ್ದ ಎನ್ನಲಾಗಿದ್ದು, ಗ್ರಿಲ್ ಕೆಲಸ ಮಾಡಿಕೊಂಡು ಹಾವೇರಿಯ ಗೌಡರ ಓಣಿಯಲ್ಲಿ ರೂಮಿನಲ್ಲಿ ಕೂಲಿಕಾರರೊಂದಿಗೆ ವಾಸವಾಗಿದ್ದ. ಈತ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ವರ್ಲಿ ಪ್ರದೇಶದಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ನ.4ರಂದು ಬೆದರಿಕೆ ಸಂದೇಶ ಬಂದಿದ್ದು, ‘ಕೃಷ್ಣಮೃಗ ಹತ್ಯೆಗೈದ ಘಟನೆಗೆ ಸಂಬಂಧಿಸಿ ಸಲ್ಮಾನ್ ಖಾನ್ ನಮ್ಮ(ಬಿಷ್ಣೋಯ್ ಸಮುದಾಯದ) ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ 5 ಕೋಟಿ ರೂ. ನೀಡಬೇಕು. ತಪ್ಪಿದರೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗುವುದು. ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಬೆದರಿಕೆಯೊಡ್ಡಿದ ವ್ಯಕ್ತಿ ತಾನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಎಂದು ಹೇಳಿಕೊಂಡಿದ್ದ. ಈ ಬಗ್ಗೆ ತನಿಖೆ ನಡೆಸಿದ ಮುಂಬೈ ಪೊಲೀಸರು ಜೀವ ಬೆದರಿಕೆ ಹಾಕಿದ ವ್ಯಕ್ತಿಯ ಲೊಕೇಶನ್ ಪತ್ತೆ ಮಾಡಿದ್ದಾರೆ. ಅದರ ಆದಾರದ ಮೇಲೆ ಅವರಿಗೆ ಆರೋಪಿ ಹಾವೇರಿಯಲ್ಲಿದ್ದಾನೆ ಎಂಬುದು ಕಂಡುಬಂದಿದೆ. ಕೂಡಲೇ ಅವರು ಹಾವೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಹಾವೇರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು, ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.