ಬೆಳಗಾವಿ :
ಯುವಶಕ್ತಿಗೆ ಆತ್ಮಸ್ಥೈರ್ಯ ತುಂಬಿ, ಅವರಲ್ಲಿ ಇರುವ ಅಗಾಧವಾದ ಶಕ್ತಿಯನ್ನು ಪರಿಚಯಿಸಿ, ಅವರು ಸನ್ಮಾರ್ಗದಲ್ಲಿ ಸಾಗಿ ಅವರ ಕಾರ್ಯೋದ್ದೇಶವನ್ನು ಈಡೇರಿಸುವ ಪ್ರೇರಕ ಶಕ್ತಿ ಸ್ವಾಮಿ ವಿವೇಕಾನಂದರ ಶಕ್ತಿಯುತವಾದ ನುಡಿಗಳಲ್ಲಿವೆ ಎಂದು ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿರ್ದೇಶಕ ಡಾ. ಸಂಜಯ ಹೊಸಮಠ ಅಭಿಪ್ರಾಯ ಪಟ್ಟರು.
ನಗರದ ಗುರು ವಿವೇಕಾನಂದ ವಿವಿಧ ಉದ್ದೇಶಗಳ ಸಹಕಾರ ಸಂಘದ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ನಡೆ – ನುಡಿ ಪ್ರತಿಯೊಬ್ಬ ವ್ಯಕ್ತಿಗೂ ಮಾದರಿ. ಅವರ ವ್ಯಕ್ತಿತ್ವ ದೇಶ-ವಿದೇಶಗಳಲ್ಲಿ ಕೂಡ ಪ್ರಭಾವ ಬೀರಿದೆ. ಭಾರತ ಯುವಕರ ದೇಶ. ಅವರ ವಿಚಾರಧಾರೆಗಳು ಯುವಕರಿಗೆ ದಾರಿದೀಪ. ಯುವಕರು ಅವರ ಚಿಂತನೆಗಳನ್ನು ಅಧ್ಯಯನ ಮಾಡುವುದರ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಅವರು, ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ, ಸಾಮಾಜಿಕ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿಯೂ ಪ್ರಭಾವ ಬೀರಿದ್ದಾರೆ.
ಸ್ವಾತಂತ್ರ್ಯ ಸಂದರ್ಭದಲ್ಲಿ ತಮ್ಮ ತಪಃಪೂರ್ಣವಾದ ಶಕ್ತಿಯ ನುಡಿಗಳಿಂದ ಜಡವಾಗಿರುವ ಭಾರತವನ್ನು ಜಾಗೃತಗೊಳಿಸಿದರು. ಅವರ ಮಾತುಗಳಿಂದ ಸ್ವಾತಂತ್ರ್ಯ ಹೋರಾಟಗಾರರು ಸ್ಪೂರ್ತಿ ಪಡೆದುಕೊಂಡು ಅದೆಷ್ಟೋ ಯುವ ಪಡೆ ಬ್ರಿಟಿಷರ ವಿರುದ್ಧ ಹೋರಾಡಿ ಬಲಿದಾನ ಮಾಡಲು ಸಿದ್ಧರಾದರು. ಸ್ವಾಮಿ ವಿವೇಕಾನಂದರ ನಡೆ-ನುಡಿಗಳು ಭಾರತೀಯ ಆಧ್ಯಾತ್ಮಿಕ ರಂಗದಲ್ಲಿ ಸಂಚಲನ ಮೂಡಿಸಿ ಹೊಸ ಭಾಷ್ಯವನ್ನು ಬರೆಯಿತು. ಬದಲಾವಣೆಗೆ ದಾರಿ ಮಾಡಿ ಕೊಡುವುದರ ಜೊತೆಗೆ ಅದಕ್ಕಿರುವ ಗೋಡೆಗಳನ್ನು ಮುಕ್ತಗೊಳಿಸಿತು. ಜಾತಿ -ಮತ, ಮೇಲು-ಕೀಳು ಭಾವದಿಂದ ಹೊರಬರುವಂತೆ ಕರೆ ನೀಡಿ, ಮಾನವೀಯತೆಗೆ ಒತ್ತುಕೊಟ್ಟರು. ಅದು ಮುಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಲು ಭೂಮಿಕೆಯಾಯಿತು ಎಂದರು.
ಸಂಘದ ಉಪಾಧ್ಯಕ್ಷ ಆನಂದ ಪಿ. ರಾವ್, ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ಸತೀಶ ಪಿ. ಮನ್ನಿಕೇರಿ, ಆನಂದ ಶೆಟ್ಟಿ, ಭಾರತಿ ಶೆಟ್ಟಿಗಾರ, ರೂಪಾ ಮಗದುಮ್, ಗಣೇಶ ಮರಕಾಲ, ದುರ್ಗಪ್ಪ ತಳವಾರ, ಸಂಘದ ಸಿಬ್ಬಂದಿಗಳು ಮತ್ತು ಸ್ವಾಮಿ ವಿವೇಕಾನಂದರ ಭಕ್ತವೃಂದವು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ವಿಶಾಲ ಪಾಟೀಲ ಸ್ವಾಗತಿಸಿದರು, ವನಿತಾ ಮೂಲ್ಯ ನಿರೂಪಿಸಿದರು, ನಿಧಿ ಕುಂದರ ವಂದಿಸಿದರು.