ಬೆಳಗಾವಿ: ಜೀವನದಲ್ಲಿ ಪ್ರತಿಯೊಬ್ಬರು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಕ್ಯಾಂಪ್ ಪ್ರದೇಶಲ್ಲಿರುವ ಸೆಂಟ್ ಪಾಲ್ ಹೈಸ್ಕೂಲ್ ನ ಎಡಿ ಮೆಮೋರಿಯಲ್ ಪುಟ್ಬಾಲ್ ಟೂರ್ನಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಸಚಿವರು, ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಈ ಶಾಲೆಗೆ ಉತ್ತಮ ಹೆಸರಿದೆ ಎಂದು ಹೇಳಿದರು.
ಜೀವನದಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ನಾನು ಸತತ ಎರಡು ಬಾರಿ ಚುನಾವಣೆಯಲ್ಲಿ ಸೋತರೂ ಸತತ ಪ್ರಯತ್ನದಿಂದ ಗೆದ್ದು, 7 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಒಬ್ಬಳೇ ಮಹಿಳೆ ಮಂತ್ರಿಯಾಗಿರುವೆ. ಜೀವನದಲ್ಲಿ ಸೋಲು ಗೆಲುವು ಸಾಮಾನ್ಯ, ಕ್ರೀಡಾ ಸ್ಪೂರ್ತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಳೆದ 56 ವರ್ಷಗಳಿಂದ ಈ ಟೂರ್ನಿ ನಡೆಯುತ್ತಾ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಜೊತೆಗೆ 26 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿರುವುದು ಖುಷಿ ವಿಚಾರ. ಇಂತಹ ಒಳ್ಳೆಯ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದಕ್ಕಾಗಿ ಆಯೋಜಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಫಾದರ್ ಸೈಮನ್ ಫರ್ನಾಂಡೀಸ್, ಅಲುಮ್ನಿಯ ಅಧ್ಯಕ್ಷರಾದ ಡಾ. ಮಾಧವ ಪ್ರಭು, ಚಾಬ್ರಿಯಾ ಮತ್ತು ನಿಪ್ಪಾಣಿಕರ್ ಕುಟುಂಬದ ಸದಸ್ಯರು, ಫರೀಶ್ ಮುರಕುಟೆ, ಅಮಿತ್ ಪಾಟೀಲ, ಕಿರಣ ನಿಪ್ಪಾಣಿಕರ್, ಆದಿತ್ಯ, ಸಮಕ್ಷ ಚಾಬ್ರಿಯಾ, ಲಿನೋರಿಯಾ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.