ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ಕಾಂಗ್ರೆಸ್ಸಿನಲ್ಲಿ ರಾಜಕೀಯ ಬೆಳವಣಿಗೆ ನಡೆದಿದ್ದು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿಯೂ ಆಗಿರುವ ಅಬ್ದುಲ್ ಜಬ್ಬಾರ್ (MLC Abdul Jabbar) ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ದಾವಣೆಗೆರೆ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡದ ಹಿನ್ನೆಲೆಯಲ್ಲಿ ಆರಂಭವಾಗಿದ್ದ ಮುನಿಸು ಹಾಗೂ ಆಂತರಿಕ ಬೆಳವಣಿಗೆಗಳ ಕುರಿತಾದ ವರದಿಯೊಂದು ಹೈಕಮಾಂಡ್ ಕೈಸೇರಿದ್ದು, ಅದರ ಬೆನ್ನಲ್ಲೇ ಅಬ್ದುಲ್ ಜಬ್ಬಾರ್ ಅವರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ನಲ್ಲಿನ ಆಂತರಿಕ ಅಸಮಾಧಾನ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಎಐಸಿಸಿ (AICC) ಉಸ್ತುವಾರಿ ಕಾರ್ಯದರ್ಶಿ ಅಭಿಶೇಕ ದತ್ ಅವರು ಸುದೀರ್ಘ ವರದಿಯೊಂದನ್ನು ಸಿದ್ಧಪಡಿಸಿ ಹೈಕಮಾಂಡ್ಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ಕ್ಷೇತ್ರದ ಗೊಂದಲಗಳಿಗೆ ಪ್ರಮುಖ ಕಾರಣಗಳು ಮತ್ತು ಕೆಲವು ನಾಯಕರ ನಡೆಗಳ ಬಗ್ಗೆ ಗಂಭೀರ ಉಲ್ಲೇಖಗಳಿವೆ ಎನ್ನಲಾಗಿದೆ. ಈ ವರದಿ ಕೈಸೇರುತ್ತಿದ್ದಂತೆಯೇ ಹೈಕಮಾಂಡ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಅಬ್ದುಲ್ ಜಬ್ಬಾರ್ ಅವರನ್ನು ಅಮಾನತು ಮಾಡಲು ಹೈಕಮಾಂಡ್ ತೀರ್ಮಾನಿಸಿದ ಸುಳಿವು ಸಿಗುತ್ತಿದ್ದಂತೆಯೇ ಅಬ್ದುಲ್ ಜಬ್ಬಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.


