ತಿರುಮಲ: ದರ್ಶನದ ಟೋಕನ್ ಇಲ್ಲದ ಭಕ್ತರು ತಿರುಪತಿಯ ಲಡ್ಡು ಪ್ರಸಾದ ಪಡೆಯುವಾಗ ಆಧಾರ್ ತೋರಿಸುವುದನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಕಡ್ಡಾಯಗೊಳಿಸಿದೆ. ಕೆಲ ಮಧ್ಯವರ್ತಿಗಳು ಲಡ್ಡುಗಳನ್ನು ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಇದನ್ನು ತಡೆದು ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದ್ದು, ಟೋಕನ್ ಖರೀದಿಸದ ಭಕ್ತರು ತಮ್ಮ ಆಧಾರ್ ತೋರಿಸಿ 2 ಲಡ್ಡು ಪಡೆಯಬಹುದು. ಇದಕ್ಕಾಗಿ ಲಡ್ಡು ಕಾಂಪ್ಲೆಕ್ಸ್ನಲ್ಲಿ ವಿಶೇಷ ಕೌಂಟರ್ಗಳನ್ನು ಸ್ಥಾಪಿಸಲಾಗಿದೆ ಎಂದು ಟಿಟಿಡಿ ಹೇಳಿದೆ. ದರ್ಶನದ ಟೋಕನ್ ಉಳ್ಳವರು ಮೊದಲಿನಂತೆ ತಮಗೆ ಸಿಗುವ 1 ಉಚಿತ ಲಡ್ಡುವಿನೊಂದಿಗೆ ಬೇಕಾದಷ್ಟು ಹೆಚ್ಚಿಗೆ ಲಡ್ಡು ಖರೀದಿಸಲು ಅವಕಾಶವಿದೆ.