ಭಟ್ಕಳ: ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಗುಮ್ಮನಹಲ್ಲು, ಮಾವಳ್ಳಿ–02, ಮುರುಡೇಶ್ವರ ನಿವಾಸಿ ರಾಘು ತಂದೆ ಮಂಜುನಾಥ ನಾಯ್ಕ ಅವರು ನೀಡಿದ ದೂರಿನಂತೆ, ಪ್ರಾರ್ಥನಾ ಹೋಟೆಲ್ ಹಿಂಬದಿಯ ರೈಲ್ವೆ ಟ್ರ್ಯಾಕ್ ಪಕ್ಕದ ಖುಲ್ಲಾ ಜಾಗದಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಾ ವಾಕ್ ಮಾಡುತ್ತಿದ್ದ ವೇಳೆ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವಕನನ್ನು ಗಮನಿಸಿದ್ದಾರೆ.
ಮೃತ ಯುವಕನನ್ನು ಪ್ರಸಾದ ಚಂದ್ರಕಾಂತ ಕೋಳಿ (28) ಎಂದು ಗುರುತಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಸೋಮವಾರಪೇಟೆ–ಗೋಕಾಕ್ ಪ್ರದೇಶ ಮೂಲದವನು ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಯಾವುದೋ ವೈಯಕ್ತಿಕ ಕಾರಣದಿಂದ ಮನನೊಂದಿದ್ದ ಯುವಕ, ರೈಲ್ವೆ ಸ್ಟೇಷನ್ ಸಮೀಪದ ಜಾಗದಲ್ಲಿರುವ ಮರಕ್ಕೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದೇ ಯುವಕ ಕೆಲ ದಿನಗಳ ಹಿಂದೆ ಕಂಠಪೂರ್ತಿ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಕಡಲತೀರಕ್ಕೆ ತೆರಳಿ ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗುವ ಹಂತಕ್ಕೆ ತಲುಪಿದ್ದನು. ಆಗ ಮುರುಡೇಶ್ವರದ ಓಷಿಯನ್ ಅಡ್ವೆಂಚರ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಆತನ ಪ್ರಾಣ ಉಳಿದಿತ್ತು ಎಂಬುದು ಗಮನಾರ್ಹ.


