ಕಾರವಾರ : ಮನೆಯಲ್ಲಿ ಎಂದಿನಂತೆ ಊಟ ಮಾಡುತ್ತಿದ್ದಾಗ ಅನ್ನದ ಅಗಳು ಗಂಟಲಿನಲ್ಲಿ ಸಿಲುಕಿದ ಕಾರಣದಿಂದ ಉಸಿರುಗಟ್ಟಿ ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ.
ಯುವಕನನ್ನು ಬಿಣಗಾ ಮಾಳಸವಾಡ ನಿವಾಸಿ, 38 ವರ್ಷದ ಅಮಿತ್ ಮಾಳಸೇರ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಕಾರು ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಅಮಿತ್, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರಿಂದ ಚಿಕಿತ್ಸೆ ಸಹ ಪಡೆಯುತ್ತಿದ್ದರು. ತಮ್ಮ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಅಮಿತ್ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಅನ್ನದ ಅಗಳೊಂದು ಗಂಟಲಲ್ಲಿ ಸಿಲುಕಿತ್ತು. ತಕ್ಷಣ ಮನೆಯವರು ಅಮಿತ್ಗೆ ನೀರು ಕುಡಿಸಿದ್ದು, ಆತ ಅಲ್ಲೇ ಕುಸಿದು ಬಿದಿದ್ದ. ಕೂಡಲೇ ಆತನನ್ನು ಅಂಬುಲೆನ್ಸ್ ಮೂಲಕ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೇ ವೈದ್ಯರು ಪರೀಕ್ಷಿಸಿದಾಗ ಗಂಟಲಲ್ಲಿ ಅನ್ನದ ಅಗಳು ಸಿಲುಕಿ ಅಮಿತ್ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.