ಗಾಜಿಪುರ/ಗ್ವಾಲಿಯರ್: ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ವರದಕ್ಷಿಣೆಗಾಗಿ ಹತ್ಯೆಗೀಡಾಗಿದ್ದಾಳೆ ಎಂದು ಘೋಷಿಸಲಾಗಿದ್ದ ಮಹಿಳೆಯೊಬ್ಬಳು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ….!
ರುಚಿ ಎಂಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಆತನ ಪತ್ನಿಯಾಗಿ ವಾಸಿಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆಕೆಯ ಅತ್ತೆ-ಮಾವನ ಕುಟುಂಬದ ಆರು ಮಂದಿ ವರದಕ್ಷಿಣೆ ಸಾವು ಮತ್ತು ಸಾಕ್ಷ್ಯ ನಾಶದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದರು. ಇದೀಗ, ಪೊಲೀಸ್ ತನಿಖೆಯಿಂದ ಈ ಇಡೀ ಪ್ರಕರಣ ಸಂಪೂರ್ಣವಾಗಿ ಸುಳ್ಳು ಎಂದು ತಿಳಿದುಬಂದಿದೆ.
ಗಾಜಿಪುರದ ಬರಹಾಪರ್ ಭೋಜುರೈ ಗ್ರಾಮದಲ್ಲಿ ಈ ಪ್ರಕರಣ ಪ್ರಾರಂಭವಾಗಿತ್ತು. ಅಕ್ಟೋಬರ್ 3 ರಂದು ರುಚಿ ಅವರ ತಾಯಿ ರಾಜವಂತಿ ದೇವಿ ಅವರು ದೂರು ದಾಖಲಿಸಿ, ತಮ್ಮ ಮಗಳನ್ನು ಆಕೆಯ ಅತ್ತೆ-ಮಾವ ಹಾಗೂ ಕುಟುಂದವರು ಕೊಲೆ ಮಾಡಿ, ಶವವನ್ನು ಎಸೆದಿದ್ದಾರೆ ಎಂದು ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ, ಪೊಲೀಸರು ರುಚಿಯ ಪತಿ ರಾಜೇಂದ್ರ ಯಾದವ್, ಆತನ ತಾಯಿ ಕಮ್ಲಿ ದೇವಿ ಮತ್ತು ಇತರ ನಾಲ್ಕು ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಸಾವು ಮತ್ತು ಸಾಕ್ಷ್ಯ ನಾಶದ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ತಾಂತ್ರಿಕ ತನಿಖೆ:
ವಿಷಯದ ಗಂಭೀರತೆಯನ್ನು ಮನಗಂಡ ಸಾದತ್ನ ವೃತ್ತಾಧಿಕಾರಿ ರಾಮಕೃಷ್ಣ ತಿವಾರಿ ಅವರು ತನಿಖೆ ಆರಂಭಿಸಿದರು. ತಾಂತ್ರಿಕ ಟ್ರ್ಯಾಕಿಂಗ್ ವೇಳೆ, ರುಚಿ ಜೀವಂತವಾಗಿದ್ದು, ಗ್ವಾಲಿಯರ್ನಲ್ಲಿ ಗಜೇಂದ್ರ ಯಾದವ್ ಎಂಬ ವ್ಯಕ್ತಿಯೊಂದಿಗೆ ವಾಸಿಸುತ್ತಿರುವುದು ಪತ್ತೆಯಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಅಕ್ಟೋಬರ್ 7 ರಂದು ಗ್ವಾಲಿಯರ್ ತಲುಪಿ ಆಕೆಯನ್ನು ವಶಕ್ಕೆ ಪಡೆಯಿತು.
ಪ್ರಿಯಕರನೊಂದಿಗೆ ಓಡಿಹೋಗಿದ್ದ ಯುವತಿ:
ಪೊಲೀಸ್ ವಿಚಾರಣೆ ವೇಳೆ, ರುಚಿ ತನಗೆ ಇಷ್ಟವಿಲ್ಲದಿದ್ದರೂ ರಾಜೇಂದ್ರ ಯಾದವ್ ಜೊತೆ ಮದುವೆ ಮಾಡಿಸಲಾಗಿತ್ತು ಎಂದು ಒಪ್ಪಿಕೊಂಡಿದ್ದಾಳೆ. ಶಾಲಾ ದಿನಗಳಿಂದಲೂ ರೇವಾಯಿ ಗ್ರಾಮದ ಗಜೇಂದ್ರ ಎಂಬುವವರನ್ನು ಪ್ರೀತಿಸುತ್ತಿದ್ದೆ. ಕೊನೆಗೆ ಆತನೊಂದಿಗೆ ಓಡಿಹೋಗಿ ಮದುವೆಯಾದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.
ವರದಕ್ಷಿಣೆ ಸಾವಿನ ಆರೋಪ ಸುಳ್ಳು ಎಂದು ಸಿಒ ತಿವಾರಿ ದೃಢಪಡಿಸಿದ್ದಾರೆ. “ನಮ್ಮ ತನಿಖೆಯಿಂದ ಮಹಿಳೆ ಜೀವಂತವಾಗಿದ್ದಾರೆ ಎಂದು ಸಾಬೀತಾಗಿದೆ. ವರದಕ್ಷಿಣೆ ಸಾವಿನ ಪ್ರಕರಣವನ್ನು ಕಪೋಲಕಲ್ಪಿತವಾಗಿ ಸೃಷ್ಟಿಸಲಾಗಿದೆ. ಸುಳ್ಳು ದೂರು ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ರುಚಿ ಅವರ ಪತಿ ರಾಜೇಂದ್ರ ಯಾದವ್, “ನಾವು ನಿರಪರಾಧಿಗಳು, ಆದರೆ ಸುಳ್ಳು ಆರೋಪದಲ್ಲಿ ಸಿಲುಕಿಸಲಾಯಿತು. ನನ್ನ ಪತ್ನಿ ನಮ್ಮೊಂದಿಗೆ ಇರಲೇ ಇಲ್ಲ ಮತ್ತು ಆಗಾಗ್ಗೆ ಮನೆಯವರೊಂದಿಗೆ ಜಗಳವಾಡುತ್ತಿದ್ದಳು. ಆಕೆಯ ಪೋಷಕರಿಗೆ ಅವಳು ಬೇರೊಬ್ಬರೊಂದಿಗೆ ಪ್ರೀತಿಯಲ್ಲಿರುವುದು ತಿಳಿದಿತ್ತು, ಆದರೂ ನಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದರು. ಈಗ ಸತ್ಯ ಹೊರಬಂದಿದೆ, ನಮ್ಮನ್ನು ಸಿಲುಕಿಸಿದವರ ವಿರುದ್ಧ ನಾವೂ ದೂರು ದಾಖಲಿಸುತ್ತೇವೆ” ಎಂದು ಹೇಳಿದರು.
ವೈದ್ಯಕೀಯ ಪರೀಕ್ಷೆ ನಂತರ ರುಚಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಸುಳ್ಳು ವರದಕ್ಷಿಣೆ ಕೊಲೆ ದೂರು ದಾಖಲಿಸಿದವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.


