ಮಂಗಳೂರು :
ರೈಲ್ವೆ ಹಳಿಗೆ ಮರ ಬಿದ್ದಿದ್ದನ್ನ ಕಂಡ ವೃದ್ದ ಮಹಿಳೆಯೊಬ್ಬರು ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ . ರೈಲು ಅವಘಡ ತಪ್ಪಿಸಲು ಕೈಯಲ್ಲಿ ಕೆಂಪು ವಸ್ತ್ರ ಹಿಡಿದು ರೈಲಿನ ಮುಂದೆ ವೃದ್ಧೆ ಸಾಹಸ ತೋರಿದ್ದಾರೆ . ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ಈ ಘಟನೆ ನಡೆದಿದೆ . ರೈಲು ಹಳಿಗೆ ಮರ ಬಿದ್ದಿರುವುದನ್ನು 70 ವರ್ಷ ವಯಸ್ಸಿನ ಚಂದ್ರಾವತಿ ಗಮನಿಸಿದ್ದರು . ಅದೇ ವೇಳೆ ಮಂಗಳೂರು – ಮುಂಬೈ ಮತ್ಸಗಂಧ ರೈಲು ಸಂಚರಿಸುವುದರಲ್ಲಿತ್ತು . ಇದನ್ನ ಗಮನಿಸಿದ ಚಂದ್ರಾವತಿ ಅವರು ತಕ್ಷಣ ಮನೆಗೆ ಓಡೋಡಿ ಹೋಗಿ ಕೆಂಪು ಬಟ್ಟೆಯೊಂದನ್ನು ತಂದು ರೈಲು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ . ಇನ್ನು ಲೋಕೋಪೈಲೆಟ್ ಅಪಾಯ ಅರಿತು ತಕ್ಷಣ ರೈಲು ನಿಲ್ಲಿಸಿದ್ದಾರೆ . ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳು ಸುಮಾರು ಅರ್ಧ ತಾಸಿನ ಬಳಿಕ ಮರವನ್ನು ತೆರವು ಮಾಡಿದ್ದಾರೆ .
ಘಟನೆ ಹಿನ್ನೆಲೆ :
ರೈಲು ಹಳಿ ಮೇಲೆ ಮರ ಬಿದ್ದಿರುವುದನ್ನು ಗಮನಿಸಿದ ಮಹಿಳೆ ರೈಲು ಮುಂದೆ ಕೆಂಪುಬಟ್ಟೆ ಪ್ರದರ್ಶಿಸಿ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿರುವ ಸ್ತುತ್ಯಾರ್ಹ ಘಟನೆ ಪಡೀಲು -ಜೋಕಟ್ಟೆ ಮಧ್ಯೆಯ ಪಚ್ಚನಾಡಿ ಸಮೀಪದ ಮಂದಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಚಂದ್ರಾವತಿ (70) ಎಂಬವರೇ ಸಂಭಾವ್ಯ ರೈಲು ಅನಾಹುತ ತಪ್ಪಿಸಿ ಹಲವಾರು ಪ್ರಯಾಣಿಕರಿಗೆ ಆಗಬಹುದಾಗಿದ್ದ ಸಂಭವನೀಯ ಅಪಾಯ ತಪ್ಪಿಸಿದ ಮಹಿಳೆ.
ಮಾರ್ಚ್ 21ರಂದು ಮಧ್ಯಾಹ್ನ ಸುಮಾರು 2:10ರ ಅಂದಾಜು ರೈಲು ಹಳಿ ಮೇಲೆ ಮರ ಬಿದ್ದಿದ್ದು ಈ ಮಹಿಳೆಗೆ ಕಂಡುಬಂದಿದೆ. ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಮತ್ಸ್ಯಗಂಧ ರೈಲು ಸಂಚರಿಸುವ ಸಮಯವಾಗಿತ್ತು. ಇದನ್ನು ತಕ್ಷಣವೇ ಮನಗಂಡ ಚಂದ್ರಾವತಿ ಅವರು ಮನೆಯಲ್ಲಿದ್ದ ತಕ್ಷಣವೇ ಕೆಂಪು ತಂದು ರೈಲು ಬರುವ ಸಮಯಕ್ಕೆ ಅದರ ಮುಂದೆ ಕಾಣುವಂತೆ ಹಡಿದು ಲೋಕೋ ಪೈಲೆಟ್ ಅವರ ಗಮನ ಸೆಳೆದಿದ್ದಾರೆ.
ಇದನ್ನು ನೋಡಿದ ನಂತರ ಅಪಾಯದ ಮುನ್ಸೂಚನೆ ಅರಿತ ಲೋಕೋ ಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯ ಕೆಲವರು ಸೇರಿ ಹಳಿ ಬಿದ್ದ ಮರಗಳ ರೆಂಬೆಕೊಂಬೆಗಳನ್ನು ತೆರವು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿದ ಚಂದ್ರಾವತಿ ಅವರು, ನಾನು ಊಟ ಮಾಡಿ ಮನೆಯ ಅಂಗಳದಲ್ಲಿದ್ದೆ. ಅದೇ ವೇಳೆ ಮನೆ ಎದುರಿನ ರೈಲು ಹಳಿ ಮೇಲೆ ಏನೋ ಬಿದ್ದ ಶಬ್ದ ಕೇಳಿತು. ಬಂದು ನೋಡಿದಾಗ ದೊಡ್ಡ ಮರ ಹಳಿಯ ಮೇಲೆ ಬಿದ್ದಿತ್ತು. ಅದೇ ವೇಳೆಗೆ ಮುಂಬಯಿ ರೈಲು ಸಂಚರಿಸುವ ಬಗ್ಗೆ ನನಗೆ ಗೊತ್ತಿತ್ತು. ಏನು ಮಾಡಬೇಕು ಎಂದು ತಕ್ಷಣಕ್ಕೆ ಗೊತ್ತಾಗಲಿಲ್ಲ. ಈ ಬಗ್ಗೆ ಕರೆ ಮಾಡಿ ತಿಳಿಸಲು ಮನೆಗೆ ಬಂದಾಗ ರೈಲಿನ ಸೈರನ್ ಕೇಳಿಸಿತು. ಅಲ್ಲೇ ಇದ್ದ ಕೆಂಪು ಬಟ್ಟೆ ಕಂಡಿತು. ನನಗೆ ಹೃದಯದ ಆಪರೇಷನ್ ಆಗಿದೆ. ಆದರೂ ರೈಲಿನಲ್ಲಿದ್ದವರಿಗೆ ಅಪಾಯವಾಗಬಾರದು ಎಂದು ಅದನ್ನು ಲೆಕ್ಕಿಸದೆ ಕೆಂಪು ಬಟ್ಟೆ ಹಿಡಿದು ಹಳಿಯ ಬಳಿಗೆ ಓಡಿಬಂದು ರೈಲಿನ ಮುಂದೆ ಬಟ್ಟೆ ಪ್ರದರ್ಶನ ಮಾಡಿದೆ ಎಂದು ಹೇಳಿದ್ದಾರೆ.