ಹೂವಿನಹಡಗಲಿ: ಐತಿಹಾಸಿಕ ಸುಪ್ರಸಿದ್ಧ ಮೈಲಾರ ಕ್ಷೇತ್ರದಲ್ಲಿ ಬುಧವಾರ ನಡೆದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಕ್ತಿ ಮತ್ತು ಉತ್ಸಾಹದ ವಾತಾವರಣದಲ್ಲಿ ಸಂಪನ್ನವಾಯಿತು.
ಶತಮಾನಗಳ ಪರಂಪರೆಯಂತೆ 20 ಅಡಿ ಬಿಲ್ಲನೇರಿ ವಂಶಪಾರಂಪರ್ಯ ಗೊರವಯ್ಯ ರಾಮಪ್ಪ ಅವರು ‘ಸಂಪಾಯಿತಲೇ ಪರಾಕ್’ ಎಂದು ದೈವವಾಣಿ ನುಡಿ ಮೊಳಗಿಸುತ್ತಿದ್ದಂತೆಯೇ ಜಾತ್ರಾ ವಲಯದಲ್ಲಿ ಭಕ್ತರ ಜೈಕಾರಗಳು ಗುಡುಗಿದವು. ಕ್ಷಣಾರ್ಧದಲ್ಲೇ ಮೈಲಾರ ಕ್ಷೇತ್ರ ಭಕ್ತಿಯ ಮಹಾಸಾಗರವಾಗಿ ಮಾರ್ಪಟ್ಟು, ನುಡಿಯ ಅರ್ಥದ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿಸಿತು. ಮೈಲಾರ ಕಾರ್ಣಿಕೋತ್ಸವ ಮತ್ತೊಮ್ಮೆ ಭಕ್ತಿಯ ಮಹೋತ್ಸವವಾಗಿ ಮೂಡಿ ಬಂದಿದ್ದು, ಮೈಲಾರ ಕ್ಷೇತ್ರದ ವೈಭವವನ್ನು ರಾಜ್ಯದಾದ್ಯಂತ ಮತ್ತೆ ಪರಿಚಯಿಸಿದಂತಾಗಿದೆ.
ದೈವವಾಣಿ ಕೇಳಲು ಲಕ್ಷಾಂತರ ಭಕ್ತರು: ರಾಜ್ಯ, ಹೊರರಾಜ್ಯ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ಕಾರ್ಣಿಕ ನುಡಿಯನ್ನು ಕಣ್ತುಂಬಿಕೊಳ್ಳಲು ಜಾತ್ರಾ ವಲಯದಲ್ಲಿ ನೆರೆದಿದ್ದರು. ಗೊರವಯ್ಯ ಬಿಲ್ಲನೇರಿದ ಕ್ಷಣದಿಂದಲೇ ಭಕ್ತರಲ್ಲಿ ಆತುರ ಹೆಚ್ಚಾಗಿ, ನುಡಿ ಹೊರಬಂದ ಕೂಡಲೇ ಜಯಘೋಷಗಳ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಹಲವರು ಈ ನುಡಿಯನ್ನು 2026 ರ ಭವಿಷ್ಯದ ಸೂಚಕವೆಂದು ಪರಿಗಣಿಸುತ್ತಿದ್ದಾರೆ.
ರೈತ ಸಮುದಾಯದಲ್ಲಿ ಹೊಸ ಆಶಾಭಾವನೆ: ‘ಸಂಪಾಯಿತಲೇ ಪರಾಕ್’ ಎಂಬ ಭವಿಷ್ಯ ನುಡಿಯು ಕೃಷಿ ಸಮೃದ್ಧಿ, ಮಳೆ ಹಾಗೂ ಬೆಳೆಗಳ ಅಭಿವೃದ್ಧಿಗೆ ಸಂಕೇತವೆಂದು ರೈತ ಸಮುದಾಯ ಅರ್ಥೈಸುತ್ತಿದೆ. ಜಾತ್ರಾ ವಲಯದಲ್ಲಿ ರೈತರು ಸಂತಸ ವ್ಯಕ್ತಪಡಿಸುತ್ತಿದ್ದು, ಈ ವರ್ಷ ಉತ್ತಮ ಬೆಳೆ ಹಾಗೂ ಆರ್ಥಿಕ ಸ್ಥಿರತೆ ಸಿಗಲಿದೆ ಎಂಬ ಭರವಸೆ ವ್ಯಕ್ತವಾಗಿದೆ. ಗ್ರಾಮೀಣ ಪ್ರದೇಶಗಳಿಂದ ಬಂದ ಹಲವಾರು ರೈತರು ಈ ನುಡಿ ತಮ್ಮ ಬದುಕಿಗೆ ಧೈರ್ಯ ತುಂಬಿದೆಯೆಂದು ಹೇಳಿದ್ದಾರೆ.
ಕಾರ್ಣಿಕ ಸ್ಥಳದಲ್ಲಿ ಅಧಿಕಾರಿಗಳ ಗೊಂದಲ: ಭಕ್ತರಲ್ಲಿ ಅಸಮಾಧಾನ
ಮೈಲಾರ ಕಾರ್ಣಿಕೋತ್ಸವದ ಹಿನ್ನೆಲೆಯಲ್ಲಿ ಕಾರ್ಣಿಕ ಸ್ಥಳದಲ್ಲಿ ಅಧಿಕಾರಿಗಳ ಮಧ್ಯೆ ಗೊಂದಲ ಉಂಟಾಗಿ ಕೆಲಕಾಲ ಅವ್ಯವಸ್ಥೆ ಕಂಡುಬಂದ ಘಟನೆ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕಾರ್ಣಿಕ ನುಡಿ ಕೇಳಲು ಸಾವಿರಾರು ಭಕ್ತರು ಸೇರಿದ್ದ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಸ್ಪಷ್ಟವಾಗಿ ಗೋಚರಿಸಿತು.
ಕಾರ್ಣಿಕ ಸ್ಥಳದ ಪ್ರವೇಶ, ಭದ್ರತಾ ವ್ಯವಸ್ಥೆ ಹಾಗೂ ಭಕ್ತರ ನಿಯಂತ್ರಣದ ವಿಷಯದಲ್ಲಿ ಸ್ಪಷ್ಟ ನಿರ್ದೇಶನಗಳಿಲ್ಲದೇ ಅಧಿಕಾರಿಗಳು ಪರಸ್ಪರ ಗೊಂದಲಕ್ಕೀಡಾದರು. ಇದರಿಂದ ಕೆಲಕಾಲ ಭಕ್ತರ ಸಾಲುಗಳು ಅಸ್ತವ್ಯಸ್ತಗೊಂಡು ತುಸು ತಳ್ಳಾಟ-ನೂಕಾಟವೂ ಕಂಡುಬಂದಿತು. ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡ ನಂತರ ಸ್ಥಿತಿ ಸಮಾಧಾನಗೊಂಡಿತು.
ಭಕ್ತರು ಮಾತನಾಡಿ, ಇಂತಹ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂರ್ವಯೋಜನೆ ಹಾಗೂ ಸಮನ್ವಯ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಣಿಕೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮುಂದಿನ ವರ್ಷಗಳಲ್ಲಿ ಸ್ಪಷ್ಟ ಜವಾಬ್ದಾರಿ ಹಂಚಿಕೆ ಹಾಗೂ ಸೂಕ್ತ ವ್ಯವಸ್ಥೆ ಅಗತ್ಯವೆಂದು ಸಾರ್ವಜನಿಕರು ಒತ್ತಾಯಿಸಿದರು.
ಕಾರ್ಣಿಕ ನುಡಿ ಹೊರಬೀಳುವ ಕೆಲವೇ ಕ್ಷಣಗಳ ಮೊದಲು ಸ್ಥಳದಲ್ಲಿ ಏರ್ಪಟ್ಟ ಗೊಂದಲಕ್ಕೆ ಪೊಲೀಸ್ ಇಲಾಖೆ ತಕ್ಷಣ ಜಾಗೃತಿಯೊಂದಿಗೆ ಕ್ರಮ ಕೈಗೊಂಡಿತು. ಕಾರ್ಣಿಕ ನುಡಿಯುವ ಪವಿತ್ರ ವೇದಿಕೆಯ ಸುತ್ತ ಹೆಚ್ಚು ಪ್ರಮಾಣದಲ್ಲಿ ಅಧಿಕಾರಿವರ್ಗದವರು ಹಾಗೂ ವಿಶೇಷ ಪಾಸ್ ಪಡೆದ ಭಕ್ತರು ಮಾತ್ರ ಕಾಣಿಸಿಕೊಂಡಿದ್ದು, ಸಾಮಾನ್ಯ ಭಕ್ತರಿಗೆ ಸ್ಥಳಾವಕಾಶ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಲಕಾಲ ಅಸಮಾಧಾನ ವ್ಯಕ್ತವಾಯಿತು. ಪರಿಸ್ಥಿತಿ ಗಂಭೀರವಾಗುವ ಲಕ್ಷಣ ಕಂಡಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಗೂ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಸ್ವತಃ ಸ್ಥಳಕ್ಕೆ ಆಗಮಿಸಿ ಪಾಸ್ಗಳನ್ನು ಪರಿಶೀಲಿಸಿದರು. ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ ಜನಸಂದಣಿಯನ್ನು ನಿಯಂತ್ರಿಸಿದರು. ನಂತರ ಸ್ಥಳದಲ್ಲಿ ಶಿಸ್ತಿನ ವಾತಾವರಣ ನಿರ್ಮಾಣವಾಗಿದ್ದು, ಕಾರ್ಣಿಕ ನುಡಿ ಯಾವುದೇ ಅಡಚಣೆಯಿಲ್ಲದೆ ನೆರವೇರಿತು.
ಕಾರ್ಣಿಕ ವಿಶ್ಲೇಷಣೆ: ತಿಳಿವಳಿಕೆ ಪತ್ರಕ್ಕೆ ಭಕ್ತರ ಜೈಕಾರ
ಜಿಲ್ಲಾಧಿಕಾರಿಗಳ ಆದೇಶ ಪಾಲಿಸಿದ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್
ವಿಜಯನಗರ/ಹೂವಿನಹಡಗಲಿ:
ಮೈಲಾರ ಕಾರ್ಣಿಕೋತ್ಸವದ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಹೊರಡಿಸಿದ್ದ ತಿಳಿವಳಿಕೆ ಪತ್ರಕ್ಕೆ ಭಕ್ತ ವೃಂದದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಣಿಕ ನುಡಿಗೆ ಸಂಬಂಧಿಸಿದ ವಿವಾದಾತ್ಮಕ ಚರ್ಚೆಗಳಿಗೆ ಅವಕಾಶ ನೀಡದೆ ಆಡಳಿತದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿದ ಗುರುವೆಂಕಪ್ಪಯ್ಯ ಒಡೆಯರ್ ಅವರ ನಡೆ ಭಕ್ತರ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಜಿಲ್ಲಾಡಳಿತ ಹೊರಡಿಸಿದ ತಿಳಿವಳಿಕೆ ಪತ್ರದಲ್ಲಿ ಕಾರ್ಣಿಕ ನುಡಿ ಕುರಿತು ಯಾವುದೇ ವಿಶ್ಲೇಷಣೆ ಅಥವಾ ಊಹಾಪೋಹಗಳಿಗೆ ಅವಕಾಶ ನೀಡಬಾ ರದು ಎಂಬ ಸ್ಪಷ್ಟ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ, ಜಾತ್ರಾ ವಲಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆಡಳಿತದ ನಿರ್ದೇಶನಗಳನ್ನು ಪಾಲಿಸಿದ ಗುರುವೆಂಕಪ್ಪಯ್ಯ ಒಡೆಯರ್ ಅವರ ಕ್ರಮವನ್ನು ಅನೇಕರು ಜಾಣ್ಮೆಯ ನಿರ್ಧಾರ ಎಂದು ಗುರುತಿಸಿದ್ದಾರೆ. ಧಾರ್ಮಿಕ ಆಚ ರಣೆಗಳ ಗೌರವವನ್ನು ಉಳಿಸಿಕೊಂಡು, ಕಾನೂನು ನಿಯಮಗಳಿಗೆ ಆದ್ಯತೆ ನೀಡಿರುವುದು ಸಮತೋಲನದ ನಡೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ಜಾತ್ರಾ ವಲಯದಲ್ಲಿ ಲಕ್ಷಾಂತರ ಭಕ್ತರು ಆಗಮಿಸಿರುವ ಸಂದರ್ಭದಲ್ಲಿ ಯಾವುದೇ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಸಮಸ್ಯೆಗಳು ಉಂಟಾಗದಂತೆ ಕ್ರಮ ಕೈಗೊಂಡಿರುವ ಜಿಲ್ಲಾಡಳಿತದ ನಿರ್ಧಾರವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತಡೆ ಬಿದ್ದಿದ್ದು, ಜಾತ್ರೋತ್ಸವ ಶಾಂತಿಯುತವಾಗಿ ಸಾಗಲು ಸಹಕಾರಿಯಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತದ ಮಾರ್ಗದರ್ಶನ, ಗುರುವೆಂಕಪ್ಪಯ್ಯ ಒಡೆಯರ್ ಅವರ ಅನುಸರಣೆ ಹಾಗೂ ಮಾಧ್ಯಮಗಳ ಜವಾಬ್ದಾರಿಯುತ ವರದಿಗಳಿಂದ ಕಾರ್ಣಿಕೋತ್ಸವದ ವಾತಾವರಣದಲ್ಲಿ ಶಿಸ್ತು ಮತ್ತು ಶಾಂತಿ ನೆಲೆಸಿದೆ ಎಂಬುದು ಭಕ್ತರ ಒಮ್ಮತವಾಗಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಮನ್ವಯ ಮುಂದುವರಿದರೆ, ಮೈಲಾರ ಜಾತ್ರೆ ಮತ್ತಷ್ಟು ಗೌರವಯುತವಾಗಿ ನಡೆಯಲಿದೆ ಎನ್ನುವುದು ಜನರ ನಿರೀಕ್ಷೆಯಾಗಿದೆ.


