ಕುಂದಾಪುರ :
ಧಾರ್ಮಿಕ ದತ್ತಿ ಇಲಾಖೆಯಲ್ಲಿ ಅನುಪಮ ಸೇವೆ ಸಲ್ಲಿಸಿ ಉಡುಪಿ ಜಿಲ್ಲೆಯ ಸುಪ್ರಸಿದ್ಧ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಹಾಗೂ ಹೆಚ್ಚುವರಿಯಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾದ ಎಸ್.ಸಿ. (ರವಿ)ಕೋಟಾರಗಸ್ತಿ ಅವರನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸನ್ಮಾನಿಸಿ ಬಿಳ್ಕೊಡಲಾಯಿತು.
ಮೂಲತಃ ವಿಜಯಪುರದವರಾದ ರವಿ ಕೋಟಾರಗಸ್ತಿ ಅವರು ಸವದತ್ತಿಯ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳ ವಿವಿಧ ದೇವಸ್ಥಾನಗಳು, ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಸೇವಾವಧಿಯಲ್ಲಿ ಜನಾನುರಾಗಿ ಅಧಿಕಾರಿಯಾಗಿ ಎಲ್ಲರ ಪ್ರೀತಿ ಸಂಪಾದನೆ ಮಾಡಿದ್ದಾರೆ. ಬೆಳಗಾವಿಯ ಸಾಮಾಜಿಕ, ಸಾಹಿತ್ಯಿಕ, ರಂಗಭೂಮಿ ಮುಂತಾದ ಕ್ಷೇತ್ರಗಳಲ್ಲಿ ಅವರು ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಕೊಲ್ಲೂರಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಇವರ ಸೇವಾವಧಿಯಲ್ಲೇ ಅತ್ಯಂತ ಯಶಸ್ವಿಯಾಗಿ ನಡೆದಿದೆ.
ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿರುವುದಕ್ಕೆ ಕೊಲ್ಲೂರು ದೇವಸ್ಥಾನದ ಅರ್ಚಕರು ರವಿ ಕೋಟಾರಗಸ್ತಿ ಅವರ ಬಗ್ಗೆ ಆತೀವ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಾಮಾಜಿಕ ಕ್ಷೇತ್ರದಲ್ಲಿ ಗೌರವವನ್ನು ಉಳಿಸಿಕೊಂಡು ಸಾರ್ಥಕ ಸೇವೆ ಸಲ್ಲಿಸುವವರನ್ನು ಸಮಾಜ ಎಂದಿಗೂ ಗುರುತಿಸುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಗೌರವಾರ್ಪಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ಶ್ರೀ ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರವಿ ಕೋಟಾರಗಸ್ತಿ ಅವರು ಕೊಲ್ಲೂರು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ವರ್ಗಾವಣೆಯಾದ ಎಸ್.ಪಿ.ಬಿ. ಮಹೇಶ ಹಾಗೂ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಕಾರ್ಯನಿರ್ವಾಹಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಗೋವಿಂದ ನಾಯ್ಕ ಅವರನ್ನು ಗೌರವಿಸಲಾಯಿತು.
ನಾವು ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇವೆ ಎನ್ನುವುದಕ್ಕಿಂತ ನಾವು ಸಲ್ಲಿಸಿದ ಒಳ್ಳೆಯ ಸೇವೆಗಳು ಏನು ಎನ್ನುವುದೇ ಪ್ರತಿಯೊಬ್ಬರ ವೃತ್ತಿ ಜೀವನದಲ್ಲಿ ಪ್ರಾಮುಖ್ಯ ಪಡೆದಿರುತ್ತವೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಸ್ಥಾನಿಕ ಅಧಿಕಾರಿ ಲಕ್ಷ್ಮೀ, ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಚಂದ್ರ ಅಡಿಗ, ಅತುಲ್ ಕುಮಾರ್ ಶೆಟ್ಟಿ, ರತ್ನ ರಮೇಶ್ ಕುಂದರ್, ಸಂಧ್ಯಾ ರಮೇಶ್, ಕೆ.ಪಿ. ಶೇಖರ, ಕೊಲ್ಲೂರು ದೇವಳದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎ.ಶಿವರಾಂ, ಚಂದ್ರಶೇಖರ ಶೆಟ್ಟಿ ಹೊಸೂರು, ಕುಶಲ್ ಶೆಟ್ಟಿ ಮಾವಿನ ಕಟ್ಟೆ, ಪ್ರಭಾರ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಮೂಕಾಂಬಿಕಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಖೇಶ ಶೆಟ್ಟಿ ಹೊಸ್ಮಠ, ದೇವಳದ ಇಂಜಿನಿಯರ್ ಪ್ರದೀಪ್ ಅಭಿನಂದನ ಭಾಷಣ ಮಾಡಿದರು. ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಪರವಾಗಿ ರವಿ ಕೋಟಾರಗಸ್ತಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮೂಕಾಂಬಿಕಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗೋಪಾಲಕೃಷ್ಣ ಜಿ. ಬಿ. ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ವಾಸುದೇವ ಉಡುಪ ವಂದಿಸಿದರು. ಉಪನ್ಯಾಸಕರಾದ ಜ್ಯೋತಿ ಶೆಟ್ಟಿ ಹಾಗೂ ಸಂಗೀತ ಶೆಟ್ಟಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.