ಧಾರವಾಡ :ಧಾರವಾಡದ ವಿದ್ಯಾನಗರದಲ್ಲಿ ದೊಡ್ಡಮನಿ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಅಕ್ಕ ತಂಗೇರಹಾಳ ವಿದ್ಯಾರ್ಥಿಯೊಬ್ಬನಿಗೆ ಥಳಿಸಲಾಗಿದೆ. ಬೆಳಗಾವಿ ಜಿಲ್ಲೆಯಿಂದ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಧಾರವಾಡಕ್ಕೆ ಕಳಿಸುತ್ತಾರೆ. ಪ್ರತಿದಿನ ಪಾಲಕರು ತಮ್ಮ ಮಕ್ಕಳ ಬಗ್ಗೆ ದೂರದ ಊರಿನಲ್ಲಿ ಇದ್ದು ಚಿಂತೆ ಮಾಡುತ್ತಾ ಇರುತ್ತಾರೆ.
ಆದರೆ ವಸ್ತುಸ್ಥಿತಿ ಹೀಗಿರುವಾಗ ಕೋಚಿಂಗ್ ಸೆಂಟರ್ ನಲ್ಲಿ ವಿದ್ಯಾರ್ಥಿಗಳನ್ನು ಥಳಿಸುವುದು ಪಾಲಕರಿಗೆ ಯಮಯಾತನೆಯಾಗುತ್ತಿದೆ.
ಊಟಕ್ಕೆ ಕುಳಿತಾಗ ಮಾತನಾಡಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ಬಿದಿರು ಕಟ್ಟಿಗೆಯಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಅಕ್ಕತಂಗೇರಹಾಳ ಗ್ರಾಮದ ವಿದ್ಯಾರ್ಥಿಯೊಬ್ಬನಿಗೆ ಬೆನ್ನಿನಲ್ಲಿ ಬಾಸುಂಡೆ ಬರುವಂತೆ ಹೊಡೆಯಲಾಗಿದೆ. ವಿದ್ಯಾರ್ಥಿ ಕಲಿಯಲು ದಡ್ಡನೇನಲ್ಲ. 25 ಕ್ಕೆ 25 ಅಂಕ ಪಡೆಯುವ ಪ್ರತಿಭಾವಂತನಾಗಿದ್ದಾನೆ. ಆದರೆ ಇದೀಗ ಈ ರೀತಿ ಥಳಿಸಿರುವುದು
ಪಾಲಕರಿಗೆ ಮುಂದೇನು ಮಾಡುವುದು ಎನ್ನುವಂತಾಗಿದೆ.ಈ ಸೆಂಟರ್ ನಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಗೆ ಕ್ಷುಲ್ಲಕ ಕಾರಣಕ್ಕೆ ಥಳಿಸುವುದರಿಂದ ಕೆಲ ವಿದ್ಯಾರ್ಥಿಗಳು ಈಗಾಗಲೇ ಅರ್ಧಕ್ಕೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಯ ಪಾಲಕ ರಾಜು ಶೆಟ್ಟೆನ್ನವರ ಅವರು, ಕಲಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗೆ ಕಿವಿಮಾತು ಹೇಳಿ ಹೊಡೆದಿದ್ದರೆ ಒಪ್ಪಬಹುದಾಗಿತ್ತು. ನಾವು ಸಹ ಶಿಕ್ಷಕರಾಗಿ 35 ವರ್ಷ ಕಲಿಸಿ ನಿವೃತ್ತರಾಗಿದ್ದೇವೆ. ಆದರೆ ಕೇವಲ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ವಿದ್ಯಾರ್ಥಿಯನ್ನು ಥಳಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷಕ್ಕೆ ಈ ಸೆಂಟರ್ ನಲ್ಲಿ 1,25,000 ಹಣ ತೆಗೆದುಕೊಳ್ಳಲಾಗುತ್ತದೆ. ಈಗ ಮತ್ತೆ 25,000 ಕೇಳಲಾಗುತ್ತದೆ. ಇಷ್ಟೊಂದು ಹಣ ತೆಗೆದುಕೊಂಡು ನಮ್ಮ ಮಕ್ಕಳಿಗೆ ಹೊಡೆದು ಬಡಿದು ಕಲಿಸುವ ಅಗತ್ಯವಾದರೂ ಏನು ? ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
ಸೋಮನಿಂಗ ಎಂಬುವವರಿಗೆ ಈ ಸೆಂಟರ್ ಸೇರಿದ್ದಾಗಿದೆ. ಇವರ ಅಳಿಯ ವಿದ್ಯಾರ್ಥಿಗೆ ಥಳಿಸಿರುವುದು ಗೊತ್ತಾಗಿದೆ.ಧಾರವಾಡ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು. ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳನ್ನು ಬೇಕಾಬಿಟ್ಟಿ ಥಳಿಸುವ ಇಂತಹ ಕೋಚಿಂಗ್ ಸೆಂಟರ್ ಗಳ ಅನುಮತಿ ರದ್ದು ಪಡಿಸಬೇಕು ಎಂದು ವಿದ್ಯಾರ್ಥಿಯ ಪಾಲಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.