ಜನಜೀವಾಳ ಸರ್ಚ್ ಲೈಟ್ ಬೆಳಗಾವಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ (ಕೆಪಿಸಿಸಿ)ಅಧ್ಯಕ್ಷ ಹುದ್ದೆಗೆ ಮಹಿಳೆಯ ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕಿ ಹಾಗೂ ಸಚಿವೆಯಾಗಿ ರಾಜ್ಯದೆಲ್ಲಡೆ ವರ್ಚಸ್ಸು ಹೊಂದಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೆಪಿಸಿಸಿ ಪಟ್ಟ ಸಿಗಬಹುದು ಎಂಬ ಚರ್ಚೆ ಜೋರಾಗಿ ನಡೆದಿದೆ. ಸದ್ಯದಲ್ಲೇ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಆಗಲಿದೆ. ಇಡೀ ರಾಜ್ಯದ ಕಾಂಗ್ರೆಸ್ ನಾಯಕರು ಈ ನಿಟ್ಟಿನಲ್ಲಿ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲದಿಂದ ಇದ್ದಾರೆ. ಈ ನಡುವೆ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಂದಿನಂತೆ ಇದೀಗ ತಂತ್ರಗಾರಿಕೆ ನಡೆಸಿದ್ದು ತಮ್ಮಲ್ಲಿರುವ ದಾಳವನ್ನು ಪ್ರಯೋಗಿಸಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಯಿಂದ ತಾನು ಕೆಳಗಿಳಿಯಲು ಸಿದ್ಧ. ಆದರೆ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳು ಬರಲು ತನ್ನ ಕೊಡುಗೆ ಅಪಾರವಾಗಿದ್ದು ತಾನು ಅಧ್ಯಕ್ಷನಾಗಿದ್ದಾಗ ಇದು ಸಾಧ್ಯವಾಯಿತು. ಹೀಗಾಗಿ ತಮ್ಮ ಬಣದವರನ್ನೇ ಮುಂದಿನ ಅಧ್ಯಕ್ಷ ಹುದ್ದೆಗೆ ತರಲು ಅವರು ತೆರೆ ಮರೆಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ತಮ್ಮ ಬಣದವರೇ ಆಗಿರುವ ಮಾಜಿ ಸಂಸದ ಹಾಗೂ ಸಹೋದರರು ಆಗಿರುವ ಡಿ.ಕೆ. ಸುರೇಶ್ ಅಥವಾ ತಮ್ಮ ಬಲಗೈ ಬಂಟರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೇ ಕೆಪಿಸಿಸಿ ಹುದ್ದೆಗೆ ತರುವ ನಿಟ್ಟಿನಲ್ಲಿ ಅವರು ಕಾರ್ಯತಂತ್ರ ಹೆಣೆದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಕ್ಷಾಧ್ಯಕ್ಷ ಹುದ್ದೆ ಅಲಂಕರಿಸಲು ಅತ್ಯಂತ ಸಮರ್ಥರು. ಎರಡು ಬಾರಿ ಬೆಳಗಾವಿಯಂತಹ ದೊಡ್ಡ ಜಿಲ್ಲೆಯ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ ಅಪಾರ ಅನುಭವ ಹೊಂದಿದ್ದಾರೆ. ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಪದವನ್ನು ಅವರು ನಿಭಾಯಿಸಿದ್ದಾರೆ. ಹೀಗಾಗಿ ಅವರಿಗೆ ಸಾರಥ್ಯ ವಹಿಸಿದರೆ ಅವರು ಅತ್ಯಂತ ಸಮರ್ಥನೀಯವಾದ ರೀತಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವುದರಲ್ಲಿ ಯಾವ ಸಂದೇಹವು ಇಲ್ಲ ಎಂದು ವರಿಷ್ಠರಿಗೆ ಮನವರಿಕೆ ಮಾಡಿ ಅಧ್ಯಕ್ಷ ಹುದ್ದೆಯನ್ನು ಮತ್ತೆ ತಮ್ಮ ಬಣಕ್ಕೆ ತಂದರೂ ಅಚ್ಚರಿಪಡಬೇಕಾಗಿಲ್ಲ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ತಮ್ಮ ಬಣದ ಕೈತಪ್ಪಿ, ಡಿ.ಕೆ. ಶಿವಕುಮಾರ್ ಬಣಕ್ಕೆ ಹೋಗಬಾರದು ಎಂದು ಶತಃಪ್ರಯತ್ನ ಮಾಡುತ್ತಿದೆ. ಮೇಲ್ನೋಟಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಒಂದೇ ಎಂಬಂತೆ ಕಂಡರೂ ತೆರೆಯ ಹಿಂದೆ ಮಾತ್ರ ಉಭಯ ಬಣಗಳ ನಡುವೆ ಮೇಲಾಟ ತುಸು ಜೋರಾಗಿದೆ. ಈ ಶೀತಲ ಸಮರದಲ್ಲಿ ಯಾವ ಬಣಕ್ಕೆ ಜಯ ಸಿಗುತ್ತದೆ ಕಾದು ನೋಡಬೇಕಾಗಿದೆ!