ಬೆಳಗಾವಿ :
ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಮೊದಲಿನಿಂದಲೂ ರಮೇಶ ಜಾರಕಿಹೊಳಿ ವಿರುದ್ಧ ಸ್ಪರ್ಧೆ ನಡೆಸುತ್ತಾ ಬಂದಿರುವ ಅಶೋಕ ಪೂಜಾರಿ ಅವರಿಗೆ ಕಾಂಗ್ರೆಸ್ ಕೈ ತಪ್ಪಿದೆ. ಈ ಹಿನ್ನಲೆಯಲ್ಲಿ ಅವರ ನಡೆ ಈಗ ನಿಗೂಢವಾಗಿದೆ.
ಅಶೋಕ ಪೂಜಾರಿ ಮೊದಲಿನಿಂದಲೂ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಂಸದರಾಗಿದ್ದ ಸುರೇಶ ಅಂಗಡಿ ಅವರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಅವರು ಬಿಜೆಪಿ ಸೇರ್ಪಡೆಗೊಂಡು ರಮೇಶ ಜಾರಕಿಹೊಳಿ ಅವರನ್ನು ಎದುರಿಸಿದ್ದರು. ಆದರೆ, ಕಾಲನಂತರ ರಮೇಶ ಜಾರಕಿಹೊಳಿ ಬಿಜೆಪಿ ಸೇರ್ಪಡೆಗೊಂಡರು. ಇದರಿಂದ ಅಶೋಕ ಪೂಜಾರಿ ಮತ್ತೆ ಪಕ್ಷ ಬದಲಾವಣೆ ಮಾಡಬೇಕಾಯಿತು. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಂಡರು. ಕಾಂಗ್ರೆಸ್ ಈ ಬಾರಿ ತಮಗೆ ಟಿಕೆಟ್ ನೀಡುತ್ತದೆ ಎಂದು ಭಾವಿಸಿದ್ದರು. ಆದರೆ, ಈಗ ಮಹತ್ವದ ಬೆಳವಣಿಗೆಯಲ್ಲಿ ಈ ಬಾರಿ ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಶೋಕ್ ಪೂಜಾರಿ ಅವರ ಬದಲಿಗೆ ಮಹಾಂತೇಶ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಅವರ ರಾಜಕೀಯಕ್ಕೆ ಹಿನ್ನಡೆಯನ್ನು ಉಂಟುಮಾಡಿದೆ. ಈ ಹಿನ್ನಲೆಯಲ್ಲಿ ಅಶೋಕ ಪೂಜಾರಿ ಮತ್ತೆ ಜೆಡಿಎಸ್ ಸೇರ್ಪಡೆಗೊಳ್ಳುತ್ತಾರೋ ಅಥವಾ ಕಾಂಗ್ರೆಸ್ನಲ್ಲೇ ಉಳಿಯುತ್ತಾರೋ ಎನ್ನುವುದು ಕಾದು ನೋಡಬೇಕಾಗಿದೆ.