ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಗಣೇಶಪುರ ಗ್ರಾಮದ ಮೆಲವಿನ್ ಫರ್ನಾಂಡೀಸ್ ಎಂಬ ಸೆಂಟ್ ಪಾಲ್ ಕಾಲೇಜಿನ ವಿದ್ಯಾರ್ಥಿ ಪಿಯುಸಿ ದ್ವೀತಿಯ ವರ್ಷದ ಪರೀಕ್ಷೆಯಲ್ಲಿ ಶೇ.93ರಷ್ಟು ಅಂಕಗಳನ್ನು ಪಡೆದು, ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ವಿದ್ಯಾರ್ಥಿಯನ್ನು ಸತ್ಕರಿಸಿದರು.
ಕಡು ಬಡತನದಲ್ಲಿಯೂ ತಾಯಿಯ ಗೃಹಲಕ್ಷ್ಮಿ ಯೋಜನೆಯ ಹಣ ಮೆಲವಿನ್ ವಿದ್ಯಾಭ್ಯಾಸಕ್ಕೆ ಬಳಕೆ ಮಾಡಲಾಗಿದೆ. ತಂದೆ ಆಟೋ ಚಾಲಕರಾಗಿದ್ದು, ತಾಯಿ ಮನೆಯ ಜವಾಬ್ದಾರಿಯೊಂದಿಗೆ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಗೃಹಲಕ್ಷ್ಮೀ ಯೋಜನೆಯ ಹಣದ ಬಗ್ಗೆ ಹರ್ಷ ವ್ಯಕ್ತಪಡಿಸಿ, ಗೃಹಲಕ್ಷ್ಮಿ ಹಣ ನಮ್ಮಂತಹ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ಥಳೀಯ ಮುಖಂಡರೊಂದಿಗೆ ವಿದ್ಯಾರ್ಥಿಯನ್ನು ಭೇಟಿ ಮಾಡಿ ಸತ್ಕರಿಸಿದ ಮೃಣಾಲ ಹೆಬ್ಬಾಳಕರ್, ಅಭಿನಂದಿಸಿ ಶುಭ ಕೋರಿದರು.
ವಿದ್ಯಾರ್ಥಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮುಂದಿನ ವ್ಯಾಸಂಗ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.