ಬೀದರ್: ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ 9ನೇ ತರಗತಿ ವಿದ್ಯಾರ್ಥಿನಿಯ ವಾರ್ಷಿಕ ಪರೀಕ್ಷೆಯ ಪ್ರವೇಶ ಪತ್ರ (ಹಾಲ್ ಟಿಕೆಟ್) ಅನ್ನು ಕುರಿ ತಿಂದ ಕಾರಣ ಅದರಿಂದ ಮನನೊಂದು ಬೇಸರಪಟ್ಟು ಆಕೆ ಆತ್ಮಹತ್ಯೆಗೆ ಮುಂದಾದ ಘಟನೆ ನಡೆದಿದೆ.
14 ವರ್ಷದ ವಿದ್ಯಾರ್ಥಿನಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು ಈಕೆಯ ಪ್ರವೇಶ ಪತ್ರವನ್ನು ಸೋಮವಾರ ರಾತ್ರಿ ಕುರಿ ತಿಂದಿದೆ. ಇದರಿಂದ ಆತಂಕಗೊಂಡ ಆಕೆ ಶಾಲೆಯ ಮುಖ್ಯ ಗುರುಗಳ ಹೆಸರಿನಲ್ಲಿ ಒಂದು ಪತ್ರ ಬರೆದಿದ್ದು ನನ್ನ ಪರೀಕ್ಷೆ ಪ್ರವೇಶ ಪತ್ರ ಕಳೆದ ಕಾರಣ ನನಗೆ ಶಾಲೆಗೆ ಬರಲು ಆಗಲ್ಲ, ನಾನು ಸತ್ತು ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಿಬಿಡಿ ಎಂದು ವಿವರಿಸಿದ್ದಾಳೆ. ಅಣ್ಣನ ಕೈಗೆ ಪತ್ರವನ್ನು ಕೊಟ್ಟು ಸಂಜೆ ಏಳು ಗಂಟೆ ಸುಮಾರಿಗೆ ಮನೆಯಿಂದ ನಾಪತ್ತೆಯಾಗಿದ್ದಾಳೆ. ನಂತರ 11:30 ರ ಸುಮಾರಿಗೆ ಬಾಲಕಿ ತನ್ನ ಸಂಬಂಧಿಕರ ಜಮೀನಿನ ಬಾವಿಯಲ್ಲಿ ಅಳುತ್ತಾ ಕುಳಿತಿರುವುದು ಕೇಳಿ ರಕ್ಷಿಸಿ ಬಾವಿಯಿಂದ ಮೇಲೆ ತರಲಾಗಿದೆ.
ಸುಮಾರು 30 ಅಡಿಗಳಷ್ಟು ಬಾವಿ ಆಳ ಇದೆ. ಬೇಸಿಗೆ ಕಾರಣ ಬಾವಿಯಲ್ಲಿ ನೀರು ಕಡಿಮೆ ಆಗಿದೆ. ಇದರಿಂದ ಆಕೆಯ ಜೀವಕ್ಕೆ ಯಾವುದೇ ತೊಂದರೆ ಆಗಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಯದಿಂದ ಪಾರಾಗಿದ್ದಾಳೆ. ಮಂಗಳವಾರ ಎಂದಿನಂತೆ ಪರೀಕ್ಷೆಗೆ ಹಾಜರಾಗಿದ್ದಾಳೆ.