ಬಳ್ಳಾರಿ : ಖಾಸಗಿ ಶಾಲಾ ಹಾಸ್ಟೆಲ್ನಲ್ಲಿ ಶನಿವಾರ ತಡರಾತ್ರಿ 9 ನೇ ತರಗತಿಯ ವಿದ್ಯಾರ್ಥಿಯೊಬ್ಬ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ನಂತರ ಓರ್ವ ವಿದ್ಯಾರ್ಥಿ ಸಾವಿಗೀಡಾಗಿದ್ದು, ಇತರ ಏಳು ಜನ ಗಾಯಗೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಶಾಲೆಯಲ್ಲಿ ನಡೆದ ಸಣ್ಣಪುಟ್ಟ ವಿವಾದದ ನಂತರ ಹಾಸ್ಟೆಲಿನ ಬೆಡ್ ರಾಡ್ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಾಸ್ಟೆಲ್ ವಾರ್ಡನ್ ಮೇಲೆಯೂ ಬಾಲಕ ಹಲ್ಲೆ ಮಾಡಿದ್ದು, ಹಲ್ಲೆ ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಊಟದ ನಂತರ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಮಲಗಿದ್ದಾಗ ದಾಳಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿಯ ಕುಟುಂಬವು ಬಾಲಕನಿಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಆರೋಪಿಸಿದೆ.
ಆರೋಪಿ ಮಾದಕ ವ್ಯಸನಿಯಾಗಿರಬಹುದು ಎಂದು ಆರೋಪಿಸಿರುವ ಕುಟುಂಬ, ಈ ದುರಂತಕ್ಕೆ ಶಾಲಾ ಆಡಳಿತ ಮಂಡಳಿಯೇ ಕಾರಣ ಎಂದು ಹೇಳಿದೆ. ಅಪ್ರಾಪ್ತ ವಯಸ್ಕನೊಬ್ಬ ಹಾಸ್ಟೆಲ್ ಒಳಗೆ ಇಷ್ಟೊಂದು ಕ್ರೂರವಾಗಿ ಹೇಗೆ ಹಲ್ಲೆ ನಡೆಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.


