ದೆಹಲಿ:
ಸಂಸತ್ನ ವಿಶೇಷ ಅಧಿವೇಶನವು ಸೆ.18 ರಂದು ಸಂಸತ್ನ ಹಳೆಯ ಕಟ್ಟಡದಲ್ಲಿ ಪ್ರಾರಂಭವಾಗಲಿದೆ. ಎರಡನೇ ದಿನದ ಅಧಿವೇಶನ ಸೆ.19ರಂದು ಗಣೇಶ ಚತುರ್ಥಿ ಸಂದರ್ಭ ಸಂಸತ್ನ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.
ಮೂಲಗಳ ಪ್ರಕಾರ, ಈ ವಿಶೇಷ ಅಧಿವೇಶನದ ಮೊದಲ ದಿನ ಸಂಸತ್ತಿನ ಉಭಯ ಸದನಗಳ ಕಲಾಪ ಈ ಹಿಂದೆ ಇದ್ದ ರೀತಿಯಲ್ಲಿಯೇ ಸಂಸತ್ತಿನ ಹಳೆಯ ಕಟ್ಟಡದಲ್ಲಿ ಆರಂಭವಾಗಲಿದೆ. ಎರಡನೇ ದಿನದಿಂದ (ಸೆ.19) ಉಭಯ ಸದನಗಳ ಕಲಾಪಗಳು ಹೊಸ ಕಟ್ಟಡದಲ್ಲಿ ನಡೆಯಬಹುದು. ಹಿಂದೂ ನಂಬಿಕೆಯಂತೆ, ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಹೊಸ ಕಟ್ಟಡದಲ್ಲಿ ಕಲಾಪ ಪ್ರಾರಂಭಿಸುವುದು ಮಂಗಳಕರ. ಹೊಸ ಕಟ್ಟಡದಲ್ಲಿ ಶುಭ ದಿನದಂದು ಅಧಿವೇಶನ ಪ್ರಾರಂಭಿಸಲು ಸರ್ಕಾರ ಗಣೇಶ ಚತುರ್ಥಿ ಆಯ್ದುಕೊಂಡಿದೆ ಎಂದು ಮೂಲಗಳು ಹೇಳಿವೆ.
ಕೇಂದ್ರ ಸರ್ಕಾರವು ಸೆ.18ರಿಂದ ಸೆ.22ರವರೆಗೆ ವಿಶೇಷ ಅಧಿವೇಶನ ಕರೆದಿದೆ. ಸಂಸತ್ತಿನ ಹೊಸ ಕಟ್ಟಡದಲ್ಲಿ ಕಲಾಪಗಳು ನಡೆಯುವ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.