ಬೆಳಗಾವಿ: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಮೂರು ಜಿಲ್ಲೆಗಳನ್ನಾಗಿ ಒಡೆಯುವ ಸಂಬಂಧ ಚರ್ಚೆ ನಡೆಸುವ ಸಲುವಾಗಿ ಜಿಲ್ಲೆಯ ಎಲ್ಲ 18 ಶಾಸಕರನ್ನು ಮಾತ್ರ ಅಹ್ವಾನಿಸದೆ ಗಡಿ ಭಾಗದ ಕನ್ನಡ ಸಂಘಟನೆಗಳನ್ನು ಸಹ ಚರ್ಚೆಯ ಕಾಲಕ್ಕೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಗುರುವಾರ ಸಭೆ ಸೇರಿದ್ದ ಕನ್ನಡ ಸಂಘಟನೆಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಲಾಗಿದೆ.
ಜಿಲ್ಲೆಯನ್ನು ಒಡೆಯುವ ಮುನ್ನ ನಾಡು, ನುಡಿ, ಗಡಿಯ ಸೂಕ್ಷ್ಮತೆಯನ್ನು ರಾಜ್ಯ ಸರಕಾರ ಗಮನದಲ್ಲಿ ಇಟ್ಟಕೊಳ್ಳಬೇಕು. 1997 ರ ಆಗಸ್ಟ್ 22 ರಂದು ಜೆ.ಎಚ್. ಪಟೇಲ್ ಸರಕಾರ ಜಿಲ್ಲೆಯನ್ನು ಒಡೆದು ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳನ್ನಾಗಿ ವಿಭಜಿಸಿತ್ತು. ಜಿಲ್ಲೆಯ 11 ಜನತಾ ದಳದ ಶಾಸಕರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡು, ಕನ್ನಡಿಗರ ಭಾವನೆಗಳನ್ನು ನಿರ್ಲಕ್ಷಿಸಿ ನಿರ್ಧಾರ ಕೈಕೊಂಡಿತ್ತು. ಇದರ ಪರಿಣಾಮವಾಗಿ 1997 ಅಗಷ್ಟ್ 25 ರಿಂದ ಜಿಲ್ಲೆಯಲ್ಲಿ ಆರಂಭವಾದ ಉಗ್ರ ರೂಪದ ಚಳವಳಿ 1 ತಿಂಗಳ ಕಾಲ ನಡೆದಿದ್ದರಿಂದ ಸೆಪ್ಟಂಬರ್ 21 ರಂದು ಪಟೇಲ್ ಸರಕಾರ ವಿಭಜನೆಯನ್ನು ಕೈಬಿಟ್ಟಿತ್ತಲ್ಲದೇ ಗಡಿ ವಿವಾದ ಇತ್ಯರ್ಥವಾಗುವವರೆಗೆ ಬೆಳಗಾವಿ ಜಿಲ್ಲೆಯನ್ನು ಒಡೆಯುವದಿಲ್ಲವೆಂದು ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಗಳೇ ಘೋಷಿಸಿಬೇಕಾಯಿತು. ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಹಾಗೂ ಖ್ಯಾತ ಕನ್ನಡ ಹೋರಾಟಗಾರ ಪಾಟೀಲ ಪುಟ್ಟಪ್ಪನವರು ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಪಟೇಲರಿಗೆ ಬುದ್ಧಿವಾದ ಹೇಳಿದ್ದರು ಎಂದು ಸಭೆಯಲ್ಲಿ ಮಾತನಾಡಿದ ಕನ್ನಡ ಮುಖಂಡರು ಸ್ಮರಿಸಿಕೊಟ್ಟರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೇವಲ ಶಾಸಕರನ್ನು ಮಾತುಕತೆಗೆ ಆಹ್ವಾನಿಸದೆ ಗಡಿ ಭಾಗದ ಕನ್ನಡ ಸಂಘಟನೆಗಳನ್ನು ಆಹ್ವಾನಿಸಿ ಜಿಲ್ಲೆಯ ವಿಭಜನೆಯ ಸಾಧಕ ಬಾಧಕಗಳನ್ನು ಚರ್ಚಿಸಬೇಕು ಎಂದು ಸಭೆಯು ಆಗ್ರಹಿಸಿತು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಕರೆದಿದ್ದ ಸಮಾಲೋಚನೆ ಸಭೆಯಲ್ಲಿ ಜಿಲ್ಲೆಯ ವಿಭಜನೆ ವಿಷಯ ತೀವ್ರ ಚರ್ಚೆಗೆ ಒಳಗಾಯಿತಲ್ಲದೇ ಕನ್ನಡ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೈಕೊಳ್ಳುವ ನಿರ್ಧಾರದ ದುಷ್ಪರಿಣಾಮಗಳಿಗೆ ರಾಜ್ಯ ಸರಕಾರವೇ ಹೊಣೆಯಾಗುತ್ತದೆಯೆಂದು ಎಚ್ಚರಿಸಲಾಯಿತು.
ರಾಜ್ಯ ಸರಕಾರದ 7ಕೋಟಿ ರೂ.ಗಳ ಅನುದಾನದಲ್ಲಿ ಬೆಳಗಾವಿಯ ನೆಹರೂ ನಗರದಲ್ಲಿ ನಿರ್ಮಿಸಲಾದ ಕನ್ನಡ ಭವನವನ್ನು ಖಾಸಗಿ ಸಂಘ ಯಾವುದೇ ಸರಕಾರದ ಅಧಿಕೃತ ಆದೇಶವಿಲ್ಲದೇ ಅಕ್ರಮವಾಗಿ ನಿರ್ವಹಿಸುತ್ತಿದ್ದು ಇದನ್ನು ನಿರ್ವವಹಿಸಲು ಬೆಳಗಾವಿಯ ಜಿಲ್ಲಾಧಿಕಾರಿಗಳು ರಚಿಸಿದ ನಿರ್ವಹಣೆಯ ಸಮಿತಿಯ ಆದೇಶಗಳಿಗೆ ಹೈಕೋರ್ಟ್ ಧಾರವಾಡ ಪೀಠವು ತಡೆಯಾಜ್ಞೆ ನೀಡಿದ್ದು ಇದನ್ನು ತೆರವುಗೊಳಿಸಲು ಹಾಗೂ ಕನ್ನಡ ಭವನವನ್ನು ಗಡಿ ಭಾಗದ ಕನ್ನಡ ಸಂಘಟನೆಗಳಿಗೆ, ರಂಗ ಚಟುವಟಿಕೆಗಳಿಗೆ ಅತ್ಯಂತ ಕಡಿಮೆ ಬಾಡಿಗೆಯಲ್ಲಿ ನೀಡಲು ತಮ್ಮ ಪ್ರಾಧಿಕಾರ ಬದ್ಧವಾಗಿದೆಯೆಂದು ಸೋಮಣ್ಣ ಬೇವಿನಮರದ ಅವರು ಭರವಸೆ ನೀಡಿದರು.
ಬುಧವಾರ ತಾವು ಖುದ್ದಾಗಿ ಕನ್ನಡ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾಗಿ ಹೇಳಿದ ಸೋಮಣ್ಣ ಬೇವಿಮರದ ಅವರು, ಖಾಸಗಿ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅವ್ಯವಹಾರಗಳು ತಮ್ಮ ಗಮನಕ್ಕೆ ಲಿಖಿತ ರೂಪದಲ್ಲಿ ಬಂದಿವೆಯೆಂದು ಸಭೆಗೆ ತಿಳಿಸಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜೀದ ಹಿರೇಕೊಡಿ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಆರ್. ಅಭಿಲಾಷ, ಗಡಿನಾಡು ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜು ಕೋಲಾ, ಕನ್ನಡ ಜಾಗೃತಿ ಸಮಿತಿಯ ಸದಸ್ಯೆ ಕಸ್ತೂರಿ ಭಾವಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ತಾಲೂಕು ಅಧ್ಯಕ್ಷ ಸುರೇಶ ಹಂಜಿ, ಬೆಳ್ಳಿಚುಕ್ಕಿ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಮುಂತಾದವರು ಗಡಿ ಭಾಗದ ಕನ್ನಡಿಗರ ಸಮಸ್ಯೆಗಳ ಬಗ್ಗೆ ಮಾತನಾಡಿದರು.


