ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಉಪ ಆಯುಕ್ತರ ಕಾರಿಗೆ ನೋಟಿಸ್ ಪ್ರತಿ ಅಂಟಿಸಿರುವ ಘಟನೆ ನಡೆದಿದೆ. ಶಹಾಪುರ ಹೈಬತ್ತಿ ಕಾಲೋನಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ನ್ಯಾಯಾಲಯದ ಆದೇಶದಂತೆ ಮಹಾನಗರ ಪಾಲಿಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸಂತ್ರಸ್ತರೊಬ್ಬರು ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಉಪ ಆಯುಕ್ತರ ಕಚೇರಿ ಕಾರಿಗೆ ನೋಟಿಸ್ ಪ್ರತಿ ಅಂಟಿಸಿದ್ದಾರೆ. ನಾನು ರಸ್ತೆ ನಿರ್ಮಾಣಕ್ಕೆ 5 ಎಕರೆ ಜಮೀನು ನೀಡಿರುವೆ, ಆದರೆ, ಹಲವು ವರ್ಷಗಳಿಂದ ಪರಿಹಾರ ಕೊಡದೆ ಇರುವುದರಿಂದ ನನಗೆ 75.96 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ ಪಾಲಿಕೆಯಲ್ಲಿನ ವಸ್ತು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಮಹಾನಗರ ಪಾಲಿಕೆಯ ವಸ್ತುಗಳ ಜಪ್ತಿಗೆ ಬಂದಿದ್ದೇನೆ. ಆದರೆ, ವಸ್ತುಗಳ ಜಪ್ತಿಗೆ ಸಿಬ್ಬಂದಿ ಅವಕಾಶ ಕೊಡದೆ ಇರುವುದರಿಂದ ನೇಮಾಣಿ ಜಾಂಗಳೆ ಅವರು ಉಪ ಆಯುಕ್ತರ ಕಾರಿಗೆ ನೋಟಿಸ್ ಅಂಟಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಸೆಪ್ಟೆಂಬರ್ 4ರ ವರೆಗೆ ವಿಚಾರಣೆಗೆ ಅವಕಾಶವಿದೆ. ಪರಿಹಾರಕ್ಕೆ ನ್ಯಾಯಾಲಯದಿಂದ ಸಮಯವಕಾಶ ಕೇಳಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದರು.