ಬಸವನಬಾಗೇವಾಡಿ: ವಿವಾಹಿತೆ ಒಬ್ಬಳು ಇನ್ನು ಮದುವೆಯಾಗದ ತರುಣನ ಜೊತೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
16 ವರ್ಷದ ಯುವಕನೊಬ್ಬನನ್ನು ಪುಸಲಾಯಿಸಿ ಕರೆದುಕೊಂಡು, 28 ವರ್ಷದ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ನಡೆದಿದೆ. ಮಹಿಳೆ ವಿವಾಹಿತೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಒಂದು ಮಗುವನ್ನು ಎತ್ತಿಕೊಂಡು ಇನ್ನೊಂದನ್ನು ಬಿಟ್ಟು ಆಕೆ ಪರಾರಿಯಾಗಿದ್ದಾಳೆ.
ಮಲ್ಲಿಕಾರ್ಜುನ ಹಿರೇಮಠ (16) ಹಾಗೂ ಮಲ್ಲಮ್ಮ (28) ಓಡಿಹೋದವರು. ಇವರಿಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಪ್ರೇಮಾಂಕುರವಾಗಿದೆ. ಒಂದು ತಿಂಗಳಿನಿಂದ ಮಲ್ಲಿಕಾರ್ಜುನ ಹಾಗೂ ಮಲ್ಲಮ್ಮ ಕಾಣೆಯಾಗಿದ್ದಾರೆ.
ಕಾಣೆಯಾಗಿರುವ ಮಲ್ಲಿಕಾರ್ಜುನನ ತಾಯಿ ಅಕ್ಕಮಹಾದೇವಿ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಲ್ಲಿಕಾರ್ಜುನನಿಗೆ ಬೆಳ್ಳಿಯ ಸರವನ್ನು ಮಲ್ಲಮ್ಮ ಕೊಡಿಸಿದ್ದಳಂತೆ. ಮಲ್ಲಿಕಾರ್ಜುನನ ಬಳಿ ಆತನ ತಾಯಿ ಅಕ್ಕಮಹಾದೇವಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ಆತ ವಿಷ ಕುಡಿದಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ಎಂದು ಅಕ್ಕಮಹಾದೇವಿ ತಿಳಿಸಿದ್ದಾರೆ.
ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮೇ 13ರಂದು ಪ್ರಕರಣ ದಾಖಲಾಗಿದ್ದು, ಅದರಲ್ಲಿ ಮಲ್ಲಿಕಾರ್ಜುನ ಅಪಹರಣ ಆಗಿದ್ದಾನೆ ಎಂದು ದಾಖಲಾಗಿದೆ. ಮಲ್ಲಿಕಾರ್ಜುನನೊಂದಿಗೆ ಕಾಣೆಯಾಗಿರುವ ಮಲ್ಲಮ್ಮಗೆ ಎರಡು ಮಕ್ಕಳಿವೆ. ಇದರಲ್ಲಿ ನಾಲ್ಕು ವರ್ಷದ ಮಗುವನ್ನು ತೆಗೆದುಕೊಂಡು ಮಲ್ಲಮ್ಮ ಕಾಣೆಯಾಗಿದ್ದಾಳೆ. ಆದರೆ ಈ ಬಗ್ಗೆ ಆಕೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿಲ್ಲ.