ಪಾಟ್ನಾ : ಬಿಹಾರದ ಸಿವಾನ್ ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನು ಮಂಗವೊಂದು ಮನೆಯ ಮೇಲ್ಛಾವಣಿಯಿಂದ ತಳ್ಳಿದ್ದು, ಬಾಲಕಿ ಸಾವಿಗೀಡಾದ್ದಾಳೆ ಎಂದು ವರದಿಯಾಗಿದೆ.
ಶನಿವಾರ ಮಧ್ಯಾಹ್ನ ಭಗವಾನಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ಮಘರ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು ವಿದ್ಯಾರ್ಥಿನಿ ಪ್ರಿಯಾಕುಮಾರ ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಓದುತ್ತಿದ್ದಳು, ಈ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಂಗಗಳ ಗುಂಪೊಂದು ಮೇಲ್ಛಾವಣಿಯ ಮೇಲೆ ಬಂದು ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿತು.ಭಯದಿಂದ ಅವಳಿಗೆ ಏನು ಮಾಡಬೇಕು ಎಂದು ತಿಳಿಯದಾಯಿತು. ಈ ವೇಳೆ ಗ್ರಾಮಸ್ಥರು ಗದ್ದಲ ಸೃಷ್ಟಿಸಿದರು, ಕೂಗಿದರು. ಈ ವೇಳೆ ಧೈರ್ಯತಂದುಕೊಂಡ ಪ್ರಿಯಾ ಮೆಟ್ಟಿಲುಗಳ ಕಡೆಗೆ ಓಡಿದಳು. ಆಗ ಮಂಗವೊಂದು ಅವಳತ್ತ ಆಕ್ರಮಣಕಾರಿಯಾಗಿ ಜಿಗಿದು ಆಕೆಯನ್ನು ಬಲವಾಗಿ ತಳ್ಳಿತು, ಇದರಿಂದಾಗಿ ಆಕೆ ಮೇಲ್ಛಾವಣಿಯಿಂದ ಕೆಳಗೆ ಬಿದ್ದಳು ಎಂದು ವರದಿಯಾಗಿದೆ.
ಪ್ರಿಯಾಳ ತಲೆಯ ಹಿಂಭಾಗ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರವಾದ ಗಾಯಗಳಾದವು. ಪರಿಣಾಮ ಆಕೆ ಪ್ರಜ್ಞೆ ಕಳೆದುಕೊಂಡಳು. ಪ್ರಿಯಾಳ ಕುಟುಂಬವು ಆಕೆಯನ್ನು ಚಿಕಿತ್ಸೆಗಾಗಿ ಸಿವಾನ್ ಸದರ್ ಆಸ್ಪತ್ರೆಗೆ ಕರೆದೊಯ್ದಿತು. ಆದರೆ ದುರದೃಷ್ಟವಶಾತ್ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು.
ಭಗವಾನ್ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಸುಜೀತಕುಮಾತ ಚೌಧರಿ ಅವರು ಘಟನೆಯನ್ನು ಖಚಿತಪಡಿಸಿದ್ದಾರೆ ಮತ್ತು ತನಿಖೆಯ ವಿವರಗಳನ್ನು ಹಂಚಿಕೊಂಡಿದ್ದಾರೆ: “ಘಟನೆಯ ಬಗ್ಗೆ ನಮಗೆ ತಿಳಿದಾಗ, ನಾವು ತನಿಖೆಗಾಗಿ ಅಲ್ಲಿಗೆ ಹೋಗಿದ್ದೇವೆ. ಕುಟುಂಬ ಸದಸ್ಯರು ಬಾಲಕಿಯನ್ನು ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಲ್ಲಿ ವೈದ್ಯರು ತೀವ್ರ ಗಾಯಗಳಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು. ಕುಟುಂಬ ಸದಸ್ಯರು ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದರು ಮತ್ತು ಯಾರ ವಿರುದ್ಧವೂ ಯಾವುದೇ ದೂರು ನೀಡಿಲ್ಲ ಎಂದು ಚೌಧರಿ ಹೇಳಿದ್ದಾರೆ.