ವೈದ್ಯಕೀಯ ವಿಜ್ಞಾನವು ಇಂದು ಕಲ್ಪನೆಗೂ ನಿಲುಕದ ಸಾಧನೆಗಳನ್ನು ಮಾಡುತ್ತಿದೆ. ಅಂತಹದ್ದೇ ಒಂದು ರೋಚಕ ಮತ್ತು ಐತಿಹಾಸಿಕ ಸಾಧನೆಯ ವೈದ್ಯಕೀಯ ವಿದ್ಯಮಾನ ಅಮೆರಿಕದ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬರನ್ನು, ಅವರ ದೇಹದಲ್ಲಿ ಶ್ವಾಸಕೋಶಗಳೇ ಇಲ್ಲದಿದ್ದರೂ ಬರೋಬ್ಬರಿ 48 ಗಂಟೆಗಳ ಕಾಲ ಬದುಕಿಸಿಡುವ ಮೂಲಕ ಶಸ್ತ್ರಚಿಕಿತ್ಸಕರು ವೈದ್ಯಕೀಯ ಲೋಕದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.
33 ವರ್ಷದ ಯುವಕನೊಬ್ಬ ‘ಇನ್ ಫ್ಲೂಯೆಂಜಾ’ (Flu) ಮತ್ತು ನ್ಯುಮೋನಿಯಾ ಸೋಂಕಿನಿಂದ ತೀವ್ರ ಉಸಿರಾಟದ ತೊಂದರೆಗೆ (ARDS) ಸಿಲುಕಿ ಸಾವಿನ ಅಂಚಿನಲ್ಲಿದ್ದ. ಆತನ ಶ್ವಾಸಕೋಶಗಳು ಸೋಂಕಿನಿಂದ ಎಷ್ಟು ಹದಗೆಟ್ಟಿದ್ದವೆಂದರೆ, ವೈದ್ಯರ ಭಾಷೆಯಲ್ಲಿ ಅವು ಬಹುತೇಕ “ಕರಗಿ ಹೋಗಿದ್ದವು”. ಆತನ ಹೃದಯ ಮತ್ತು ಮೂತ್ರಪಿಂಡಗಳೂ ತೊಂದರೆ ಅನುಭವಿಸುತ್ತಿದ್ದವು.
“ಆತ ಆಸ್ಪತ್ರೆಗೆ ಬಂದ ತಕ್ಷಣ ಹೃದಯ ಬಡಿತ ನಿಂತುಹೋಗಿತ್ತು. ಶ್ವಾಸಕೋಶಗಳು ಎಷ್ಟು ಹಾನಿಗೊಳಗಾಗಿದ್ದವೆಂದರೆ, ಅವುಗಳನ್ನು ತಕ್ಷಣಕ್ಕೆ ಬದಲಾಯಿಸುವುದು ಅಸಾಧ್ಯವಾಗಿತ್ತು,” ಎಂದು ತಂಡದ ನೇತೃತ್ವ ವಹಿಸಿದ್ದ ಥೊರಾಸಿಕ್ ಸರ್ಜನ್ ಡಾ. ಅಂಕಿತ್ ಭರತ ನೆನಪಿಸಿಕೊಳ್ಳುತ್ತಾರೆ.
ಹೊಸ ತಂತ್ರಜ್ಞಾನ: “ಕೃತಕ ಶ್ವಾಸಕೋಶ”
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಶ್ವಾಸಕೋಶವು ಗುಣಮುಖವಾಗುತ್ತದೆ ಎಂದು ಕಾಯುವುದು ವಾಡಿಕೆ. ಆದರೆ, ಡಾ. ಭರತ್ ತಂಡವು ಆ ಯುವಕನ ಶ್ವಾಸಕೋಶ ಸಂಪೂರ್ಣವಾಗಿ ನಾಶವಾಗಿದೆ ಎಂಬುದನ್ನು ಮಾಲಿಕ್ಯುಲರ್ ವಿಶ್ಲೇಷಣೆಯ ಮೂಲಕ ಕಂಡುಕೊಂಡರು.
ಹೀಗಾಗಿ, ವೈದ್ಯರು ಒಂದು ಸಾಹಸಕ್ಕೆ ಕೈಹಾಕಿದರು. ರೋಗಿಯ ದೇಹದಿಂದ ಎರಡೂ ಶ್ವಾಸಕೋಶಗಳನ್ನು ಹೊರತೆಗೆದ ವೈದ್ಯರು, ರಕ್ತಕ್ಕೆ ಆಮ್ಲಜನಕ ಪೂರೈಸಲು ಮತ್ತು ಇಂಗಾಲದ ಡೈಆಕ್ಸೈಡ್ ಹೊರಹಾಕಲು “ಕೃತಕ ಶ್ವಾಸಕೋಶದ ವ್ಯವಸ್ಥೆ”ಯನ್ನು (Artificial Lung System) ಅಳವಡಿಸಿದರು.
ಅದ್ಭುತ ಫಲಿತಾಂಶ:
48 ಗಂಟೆಗಳ ಕಾಲ ಜೀವಾಧಾರ: ಶ್ವಾಸಕೋಶಗಳೇ ಇಲ್ಲದೆ ಕೇವಲ ಯಂತ್ರಗಳ ನೆರವಿನಿಂದ ರೋಗಿ ಬರೋಬ್ಬರಿ 48 ಗಂಟೆಗಳ ಕಾಲ ಜೀವಂತವಾಗಿದ್ದ. ಹಾನಿಗೊಳಗಾದ ಶ್ವಾಸಕೋಶಗಳನ್ನು ತೆಗೆದ ನಂತರ, ರೋಗಿಯ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬಂತು ಮತ್ತು ಇತರ ಅಂಗಗಳು ಚೇತರಿಸಿಕೊಂಡವು. ಎರಡು ದಿನಗಳ ನಂತರ ದಾನಿಗಳಿಂದ ಶ್ವಾಸಕೋಶ ದೊರೆತಾಗ, ಯಶಸ್ವಿಯಾಗಿ ‘ಡಬಲ್ ಲಂಗ್ ಟ್ರಾನ್ಸ್ಪ್ಲಾಂಟ್’ ಮಾಡಲಾಯಿತು.
ಶಸ್ತ್ರಚಿಕಿತ್ಸೆ ನಡೆದು ಎರಡು ವರ್ಷಗಳಾಗಿದ್ದು, ಆ ಯುವಕ ಇಂದು ಸಂಪೂರ್ಣವಾಗಿ ಸುಸ್ಥಿತಿಯಲ್ಲಿದ್ದಾನೆ. ಅವನ ಶ್ವಾಸಕೋಶಗಳು ಈಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
ಈ ಸಾಧನೆಯ ಮಹತ್ವವೇನು?
ಜೀವ ಉಳಿಸುವ ಭರವಸೆ: ಸಾಮಾನ್ಯವಾಗಿ ಶ್ವಾಸಕೋಶ ಕಸಿ ಎಂಬುದು ದೀರ್ಘಕಾಲದ ಕಾಯಿಲೆ ಇರುವವರಿಗೆ ಮಾತ್ರ ಎನ್ನಲಾಗುತ್ತಿತ್ತು. ಆದರೆ ಈ ಪ್ರಯೋಗದಿಂದಾಗಿ, ತೀವ್ರ ಉಸಿರಾಟದ ಸೋಂಕಿನಿಂದ ಸಾಯುವ ಯುವಕರನ್ನು ಉಳಿಸಲು ಸಾಧ್ಯವಿದೆ ಎಂದು ಸಾಬೀತಾಗಿದೆ.
ಬಾಹ್ಯಾಕಾಶ ನೌಕೆಗಳಲ್ಲಿ ಗಗನಯಾತ್ರಿಗಳನ್ನು ಬದುಕಿಸಲು ಬಳಸುವ ತಂತ್ರಜ್ಞಾನದಂತೆಯೇ, ಈ ಕೃತಕ ಶ್ವಾಸಕೋಶಗಳು ಐಸಿಯುನಲ್ಲಿರುವ ರೋಗಿಗಳಿಗೆ ಹೊಸ ಜೀವ ನೀಡಲಿವೆ.
“ನನ್ನ ವೃತ್ತಿಜೀವನದಲ್ಲಿ ಪ್ರತಿ ವಾರ ಕನಿಷ್ಠ ಒಬ್ಬ ಯುವಕ ಶ್ವಾಸಕೋಶದ ಸೋಂಕಿನಿಂದ ಸಾವಿಗೀಡಾಗುವುದನ್ನು ನೋಡುತ್ತೇವೆ. ಅಂತಹವರಿಗೆ ಶ್ವಾಸಕೋಶ ಕಸಿ ಒಂದು ದಾರಿ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಈ ಹೊಸ ವಿಧಾನವು ಮುಂದಿನ ದಿನಗಳಲ್ಲಿ ಸಾವಿರಾರು ಜೀವಗಳನ್ನು ಉಳಿಸಬಹುದು ಎಂದು ಡಾ.ಅಂಕಿತ ಹೇಳುತ್ತಾರೆ.
ಈ ಸಂಶೋಧನೆಯು ವೈದ್ಯಕೀಯ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ್ದು, ‘ಸೆಲ್ ಪ್ರೆಸ್’ನ ‘Med’ ಜರ್ನಲ್ನಲ್ಲಿ ಪ್ರಕಟವಾಗಿದೆ.


