ಜನ ಜೀವಾಳ ಜಾಲ : ಬೆಳಗಾವಿ: ಯಾವುದೇ ಸೇವೆ ಮಾಡಲು ವಿದ್ಯಾರ್ಥಿಗಳು ಹಿಂಜರಿಯದೇ ಸದಾಸಿದ್ಧ ಮನಸ್ಥಿತಿಯನ್ನು ಹೊಂದಬೇಕಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳಗಾವಿ ನಗರ ವಲಯ ಕಾರ್ಯದರ್ಶಿ ದೀಪಾ ಉಳ್ಳಾಗಡ್ಡಿ ಕಿವಿಮಾತು ಹೇಳಿದರು.
ನಗರದ ಕೆ.ಎಲ್.ಇ. ಜಿ.ಎ. ಪ್ರೌಢಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಡೆನ್ ಪಾವೆಲ್ ಹಾಗೂ ಲೇಡಿ ಬೆಡೆನ್ ಪಾವೆಲ್ ಅವರ ಭಾವಚಿತ್ರಕ್ಕೆ ಪೂಜೆಗೈದು ಮಾತನಾಡುತ್ತ, ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸರ್ವಾಂಗೀಣ ಅಭಿವೃದ್ಧಿ ಹೊಂದಿ ದೇಶದ ಪಗ್ರತಿಯ ಕಾರ್ಯ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ವಹಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಸಿದ್ಧರಾಮ ಗದಗ ಮಾತನಾಡಿ, ಸ್ಕೌಟ್ಸ್ ಗೈಡ್ ವಿದ್ಯಾರ್ಥಿಗಳು ಶಾಲೆಯ ಇತರ ಸಹಪಾಠಿಗಳಿಗೆ ಮಾದರಿಯಾಗಿ ಸಾಮಾಜಿಕ ಶೈಕ್ಷಣಿಕ ಕಾರ್ಯಗಳನ್ನು ಮನವನ್ನು ತೊಡಗಿಸಿಕೊಂಡು ಮಾದರಿ ಶ್ರೇಯೋಭಿವೃದ್ಧಿ ಹೊಂದಬೇಕು ಎಂದರು.
ಮಾರ್ಗರೇಟ್, ಸಿ.ಎಂ. ಪಾಗಾದ ಹಾಜರಿದ್ದರು. ಸ್ಕೌಟ್ ಮಾಸ್ಟರ್ ಶಿವರಾಯ ಏಳುಕೋಟಿ ಸ್ವಾಗತಿಸಿ ವಂದಿಸಿದರು. ಗೈಡ್ಸ್ ಮುಖ್ಯಸ್ಥೆ ಪಾರ್ವತಿ ಚಿಮ್ಮಡ ನಿರೂಪಿಸಿದರು. ಸಂಜನಾ ಹಾಗೂ ಪದ್ಮಾ ಸ್ವಾಗತ ಗೀತೆ ಹಾಡಿದರು. ಸುಮಾರು 60 ಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.