ಎಪ್ರಿಲ್ 1, ಎಸ್.ಡಿ.ಇಂಚಲರ ಜನ್ಮದಿನ. ಅವರ ಸವಿನೆನಪಿಗಾಗಿ ಚನ್ಮಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಉಪನ್ಯಾಸ ಹಾಗೂ ಕವಿತಾ ವಾಚನವನ್ನು ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ. ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಡಾ.ವ್ಹಿ.ಎಸ್.ಮಾಳಿಯವರು ವಹಿಸಲಿದ್ದಾರೆ. ಹಿಂದೂ ಪತ್ರಿಕೆಯ ಋಷಿಕೇಶ ದೇಸಾಯಿ ಉದ್ಘಾಟಿಸಲಿದ್ದಾರೆ. ಬಸವರಾಜ ಗಾರ್ಗಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಡಾ.ಮಹೇಶ ಗುರನಗೌಡರ ಆಶಯ ನುಡಿಗಳನ್ನಾಡಲಿದ್ದಾರೆ.
ಪ್ರಾ.ಬಿ.ಎಸ್ ಗವಿಮಠ ಲೇಖನ: 1932 ರಲ್ಲಿ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆ ಲಿಂಗರಾಜ ಕಾಲೇಜು ಪ್ರಾರಂಭಿಸಿದ ನಂತರದ ಕಾಲಘಟ್ಟದಲ್ಲಿ ಬೇರುಗಳನ್ನು ಗಟ್ಟಿಗೊಳಿಸಿದ ಸಾಹಿತಿಗಳನ್ನು, ಕವಿಗಳನ್ನು, ಸ್ಮರಿಸುವ ಸಂದರ್ಭದಲ್ಲಿ ಕವಿಗಳಾದ ಡಾ.ಡಿ.ಎಸ್.ಕರ್ಕಿ ಮತ್ತು ಎಸ್.ಡಿ.ಇಂಚಲರನ್ನು ಮರೆಯಲಾಗದು. ಡಾ.ಕರ್ಕಿ “ಹಚ್ಚೇವು ಕನ್ನಡದ ದೀಪ” ಬರೆದು ಖ್ಯಾತರಾದರೆ ಕವಿ ಇಂಚಲರು ಭಾರತ ಸ್ವಾತಂತ್ರ್ಯ ಚಳವಳಿ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಗಳಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತವರು. ಬೆಳಗಾವಿ ಗಡಿ ಕನ್ನಡಿಗರಲ್ಲಿ ಅಭಿಮಾನದ ಸೆಲೆ ಹುಟ್ಟುಹಾಕಿದವರು. ನಾವು ಭಾರತ ಪುತ್ರರು, ನಾವು ಶಾಂತಿಯ ಮಿತ್ರರು ಎಂದು ಹೇಳಿದರಲ್ಲದೆ ತಮ್ಮ ಕಾವ್ಯವನ್ನೇ ಖಡ್ಗವಾಗಿಸಿಕೊಂಡು ಭಾಷಾಂಧರಿಗೆ ಎಚ್ಚರಿಕೆ ನೀಡಿದರು.
ಗಂಟು ಮೂಟೆಯ ಕಟ್ಟಿ ಏಳು ಕನ್ನಡ ಬಂಟ
ಗಡಿಯ ರಕ್ಷಣೆ ನಿನ್ನ ಹೊಣೆಯ ತಾನು
ಎಂಟೆದೆಯ ಬಂಟರನು ಮೆಟ್ಟಿ ನಿಲ್ಲುವ ಕೆಚ್ಚು
ನಿನ್ನ ತಾಯ್ ಮೊಲೆ ಹಾಲಿಗಿಲ್ಲವೇನು?
ಎಂದು ಕವನ ರಚಿಸಿದ ಇಂಚಲರು ಜಿಲ್ಲಾದ್ಯಂತ ಸಂಚರಿಸಿ ತಮ್ಮ ಅದ್ಭುತ ಹಾಗೂ ಕಾವ್ಯಾತ್ಮಕ ಭಾಷಣಗಳ ಮೂಲಕ ಕನ್ನಡಿಗರನ್ನು ಬಡಿದೆಬ್ಬಿಸಿದರು. ಗಡಿಕರ್ನಾಟಕದ ಈ ಹೆಮ್ಮೆಯ ಕವಿ ಲಿಂಗರಾಜ ಕಾಲೇಜಿನ ವಿದ್ಯಾರ್ಥಿಯಾಗಿ ಪ್ರೊ.ವ್ಹಿ.ಜಿ.ಕುಲಕರಣಿ, ಪ್ರೊ. ಶಿ.ಶಿ.ಬಸವನಾಳರಿಂದ ಕನ್ನಡದ ದೀಕ್ಷೆ ಪಡೆದರು. ಲಿಂಗರಾಜ ಕಾಲೇಜಿನ ಕನ್ನಡ ಸಂಘದ ಮೂಲಕ ಕಾವ್ಯಕೃಷಿಗೆ ತೊಡಗಿ ಬಹುಎತ್ತರಕ್ಕೆ ಬೆಳೆದರು. ಕಾವ್ಯಶಾಸ್ತ್ರ ಚೌಕಟ್ಟಿನೊಳಗೆ ಕಾವ್ಯ ರಚಿಸುತ್ತಲೇ ಮುಂದೆ ಮುಕ್ತವಾದ ರೀತಿಯಲ್ಲಿ ತರಂಗಿಣಿಯಂತೆ ಕಾವ್ಯ ರಚಿಸಿದ್ದೂ ಉಂಟು. ದಿವಂಗತ ಡಾ.ಕರ್ಕಿ, ಬ.ಗಂ.ತುರಮರಿ, ಬಿ.ಎ.ಸನದಿ, ವ್ಹಿ.ಕೆಕರಡಿ ಮುಂತಾದವರ ಒಡನಾಟದಲ್ಲಿ ಜಿ.ಎ.ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಿದರು, ಕರ್ನಾಟಕದ ಪರಿಕಲ್ಪನೆ ಮಾಡಿಕೊಟ್ಟರು. ನಾಡುನುಡಿಗಳಿಗಾಗಿ ಹೋರಾಡಿದ ಕನ್ನಡಿಗರನ್ನು ಕಾವ್ಯದ ಮೂಲಕ ಚುಚ್ಚಿ ತಿವಿದು ಹೋರಾಟಕ್ಕೆ ಅಣಿಗೊಳಿಸಿದರು. ಬೆಳಗಾವಿಯಲ್ಲಿ ನಾಡಹಬ್ಬ ಉತ್ಸವ ಆಚರಣೆಗಾಗಿ ಮುನ್ನೆಲೆಯಲ್ಲಿ ನಿಂತು ಯುವಕರ ಪಡೆಕಟ್ಟಿದರು. ಇವರ ಗರಡಿಯಲ್ಲಿ ಪ್ರೊ.ಪ್ರಹ್ಲಾದಕುಮಾರ ಭಾಗೋಜಿ, ಪ್ರಭಾಕರ ಆನಿಗೋಳ, ಪಿ.ವಿಜಯಕುಮಾರ, ರಾಜಶೇಖರ ಕರ್ಕಿ, ವ್ಹಿ.ಸಿ.ಮಾಲಗತ್ತಿ, ಎಂ.ಆಯ್. ಕಣಗಲಿ, ಎಂ.ಎಸ್.ಲಠ್ಠೆ, ಡಾ.ನಿಂಗಣ್ಣ ಸಣ್ಣಕ್ಕಿ, ಬಾಳೇಶ ಲಕ್ಷೆಟ್ಟಿ, ಪುಂಡಲೀಕ ಪಾಟೀಲ, ಅಣ್ಣಪ್ಪ ಮಟ್ಟೀಕಲ್ಲಿ, ಮಹಾದೇವ ಕಣವಿ, ಎಸ್.ಡಿ.ಮೋಟಗಿ, ರಾ.ವಿ.ಹಿರೇಮಠ, ಬಿ.ಎಸ್.ಗವಿಮಠ ಮುಂತಾದ ನೂರಾರು ಶಿಕ್ಷಕರು, ಯುವಕರು, ಬೆಳಗಾವಿಯಲ್ಲಿ ಕನ್ನಡಿಗರ ಉಳಿವಿಗೆ, ಬೆಳವಣಿಗೆಗೆ ಕಂಕಣಬದ್ಧರಾದರು.
ಪೂಜ್ಯ ಡಾ.ಶಿವಬಸವಮಹಾಸ್ವಾಮಿಗಳಿಗೆ ನೆರವಾಗುತ್ತ ಬೆಳಗಾವಿಯ ಸಾಂಸ್ಕೃತಿಕ ಜೀವನದ ಶ್ರೀಮಂತಿಕೆಯನ್ನು ಹೆಚ್ಚಿಸಿದರು. 1971 ರಲ್ಲಿ ಟಿಳಕವಾಡಿಯ ಕಲಾಮಂದಿರದಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವನ್ನು ಪ್ರಾರಂಭಿಸಿದರು. ಮಿರ್ಜಿ ಅಣ್ಣಾರಾಯರು ಮೊದಲನೇ ಅಧ್ಯಕ್ಷರಾದರು. ಎಸ್.ಡಿ.ಇಂಚಲರು ಮೊದಲನೇ ಕರ್ಯಾಧ್ಯಕ್ಷರಾದರು. 1970 ರಲ್ಲಿ ದಿ.ಅರವಿಂದ ಜೋಶಿ ಕ.ಸಾ.ಪ ಅಧ್ಯಕ್ಷರಾದರು. ನಂತರ ವ್ಹಿ.ಸಿ.ಮಾಲಗತ್ತಿ ಅಧ್ಯಕ್ಷರಾಗಿದ್ದಾಗ 1980 ರಲ್ಲಿ ಅ.ಭಾ.52 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಮರುದಿನಗಳ ಕಾಲ ಲಿಂಗರಾಜ ಕಾಲೇಜು ಬಯಲಿನಲ್ಲಿ ಜರುಗಿದ ಈ ಸಾಹಿತ್ಯ ಸಮ್ಮೇಳನ ಚರಿತ್ರೆ ನರ್ಮಿಸಿತು. ಅಂದಿನಿಂದ ಈ ವರೆಗೂ ಕನ್ನಡಿಗರ ಉತ್ಸಾಹ ಅಧಿಕಗೊಳ್ಳುತ್ತ ರಾಜ್ಯೋತ್ಸವದ ಮೆರವಣಿಗೆಗಳು ಇಡೀ ಕರ್ನಾಟಕದಲ್ಲಿ ವೀರಶ್ರೀ ಹರಿದಾಡುವಂತೆ ಮಾಡಿವೆ. ಕನ್ನಡಿಗರು ಮೈಕೊಡವಿಕೊಂಡು ಎದ್ದು ಬಿಟ್ಟಿದ್ದಾರೆ. ತಲೆಕೆಳಗೆ ಮಾಡಿಕೊಂಡು ತಿರುಗಾಡುತ್ತಿದ್ದ ಕನ್ನಡಿಗ ಇಂದು ಬೆಳಗಾವಿಯಲ್ಲಿ ತಲೆಎತ್ತಿ ತಿರುಗಾಡುತ್ತಿದ್ದಾರೆ. ಯಾವ ಅಳಕು ಇಲ್ಲದೆ, ಭಯಬಿಟ್ಟು ಕನ್ನಡ ಮಾತನಾಡುತ್ತಿದ್ದಾರೆ.
ಇಂಥ ಕವಿಯ ಸ್ಮರಣೆಗೆ 1976 ರಲ್ಲಿ ಎಸ್.ಡಿ.ಇಂಚಲ ಸ್ಮಾರಕ ಸಮಿತಿ ಪ್ರಾರಂಭವಾಗಿ ಇಂದಿಗೂ ಮುಂದುವರೆದಿದೆ. ಕರ್ನಾಟಕ ಸರಕಾರ ಇಂಚಲರ ಸಮಗ್ರಕಾವ್ಯ ಪ್ರಕಟಿಸಿ ಗೌರವಿಸಿದೆ. ಇದನ್ನು ಕವಿ ಇಂಚಲರ ವಿದ್ಯಾರ್ಥಿ ಪ್ರಾ.ಬಿ.ಎಸ್.ಗವಿಮಠರು ಸಂಪಾದಿಸಿದ್ದಾರೆ. ಡಾ.ಬಿ.ಎ.ಸನದಿ, ಡಾ.ಬಸವರಾಜ ಜಗಜಂಪಿ, ಬಾಳೇಶ ಲಕ್ಷೆಟ್ಟಿಯವರು ಇಂಚಲರ ಜೀವನ ಚರಿತ್ರೆ ಬರೆದು ಗೌರವಿಸಿದ್ದಾರೆ. ಕವಿಯ ಹೆಸರಿನಲ್ಲಿ 2007 ರಿಂದ ಪ್ರತಿವರ್ಷ ಆಯ್ಕೆಯಾದ ಕಾವ್ಯಕೃತಿಗೆ 5೦೦೦ರೂ.ಗಳ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ. ಕವಿ ಇಂಚಲರು ಗಿಲಗಂಚಿ ಅರಟಾಳ ಜ್ಯೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದು 1974 ರ ಎಪ್ರಿಲ್ 7 ರಂದು ನಿಧನರಾದರು. ಅವರ ಹಿರಿಯ ಮಗ ಮಲ್ಲಿಕಾರ್ಜುನ ಇಂಚಲರೂ ಕವಿಯಾಗಿ, ಲಿಂಗರಾಜ ಕಾಲೇಜಿನ ಪ್ರಿನ್ಸಿಪಾಲರಾಗಿ, ಕನ್ನಡ ಸಾಹಿತ್ಯ ಭವನದ ಕರ್ಯದರ್ಶಿಯಾಗಿ ಬೆಳಗಾವಿ ಕನ್ನಡಿಗರ ಹಿರಿಯಣ್ಣನೆನಿಸಿದ್ದಾರೆ.