ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ರಾಜ್ಯ ಸರಕಾರದಿಂದ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗುತ್ತಿಲ್ಲ, ಈ ಬಗ್ಗೆ ಸರಕಾರದ ಗಮನ ಸೆಳೆಯಲು ಸೈಕಲ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಚಿವ ಭೈರತಿ ಸುರೇಶ ಅವರು ತಮ್ಮ ಭೇಟಿಗೆ ಸಮಯ ನಿಗದಿಪಡಿಸಿದಾಗ ಬೆಳಗಾವಿಯಿಂದ ಬೆಂಗಳೂರಿಗೆ ತೆರಳಿ ಸಚಿವರಿಗೆ ಮನವರಿಕೆ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ವಾರ್ಡ್ ನಂಬರ್ ಏಳರ ಪಕ್ಷೇತರ ಸದಸ್ಯ ಶಂಕರ ಪಾಟೀಲ ಹೇಳಿದ್ದಾರೆ. ರಾಜ್ಯ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಗೆ ಯಾವುದೇ ಅನುದಾನ ನೀಡುತ್ತಿಲ್ಲ. ಇದರಿಂದ ತಮ್ಮ ವಾರ್ಡಿನ ಜನರ ಸಮಸ್ಯೆ ಬಗೆಹರಿಸಲು ಕಷ್ಟವಾಗಿದೆ. ಹೀಗಾಗಿ ಸೈಕಲ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಸನ್ನಿವೇಶ ಅನಿವಾರ್ಯವಾಗಿ ಸೃಷ್ಟಿಯಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.