ಬೆಳಗಾವಿ : ಸೆ.22ರಿಂದ ಅ.7ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗಾಣಿಗ ಸಮಾಜದ ಬಾಂಧವರು ತಮ್ಮ ಜಾತಿ ಮತ್ತು ಉಪಜಾತಿಯನ್ನು ಗಾಣಿಗ ಎಂದೇ ನಮೂದಿಸಬೇಕು ಎಂದು ಗಾಣಿಗ ಸಮಾಜದ ಬೆಳಗಾವಿ ಜಿಲ್ಲಾಧ್ಯಕ್ಷ ರಮೇಶ ಉಟಗಿ ಮನವಿ ಮಾಡಿದರು.
ಶನಿವಾರ ನಗರದಲ್ಲಿ ನಡೆದ ಗಾಣಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಗಣತಿದಾರರು ಗಣತಿಕಾರ್ಯಕ್ಕೆ ಬಂದಾಗ ಗಾಣಿಗ ಸಮುದಾಯದವರು ಕಾಲಂ 8ರಲ್ಲಿ ಧರ್ಮ-1 ಹಿಂದು, ಕಾಲಂ 9ರಲ್ಲಿ ಜಾತಿ ಗಾಣಿಗ, ಕಾಲಂ 10ರಲ್ಲಿ ಉಪಜಾತಿ ಗಾಣಿಗ ಮತ್ತು ಕಾಲಂ 15ರಲ್ಲಿ ಮಾತೃಭಾಷೆ ಕನ್ನಡ ಎಂದು ನಮೂದಿಸಬೇಕು ಎಂದು ಮಾಹಿತಿ ನೀಡಿದರು.
ಗಾಣಿಗ ಸಮುದಾಯ ವಿವಿಧ ಹೆಸರಿನಲ್ಲಿ ಗುರುತಿಸಿಕೊಂಡಿದೆ. ಆದರೆ, ಗಣತಿ ಸಂದರ್ಭದಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಳ್ಳದೆ ಕೇವಲ ಗಾಣಿಗ ಎಂದೇ ಗುರುತಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಾಣಿಗ ಎಂದೇ ತಮ್ಮ ಸಮಾಜದ ಹೆಸರನ್ನು ನಮೂದಿಸಬೇಕು ಎಂದು ಅವರು ಮಹತ್ವದ ಸೂಚನೆ ನೀಡಿದರು.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗಾಣಿಗ ಸಮುದಾಯದ ಜನ ಪ್ರಾಬಲ್ಯ ಹೊಂದಿದ್ದಾರೆ. ಆದರೆ, ಈ ಹಿಂದೆ ವಿವಿಧ ಆಯೋಗಗಳ ವರದಿಯಲ್ಲಿ ಗಾಣಿಗ ಸಮಾಜದ ಜನಸಂಖ್ಯೆಯನ್ನು ತೀರಾ ಕಡಿಮೆಯಾಗಿ ಗುರುತಿಸಲಾಗಿದೆ. ಇದರಿಂದ ನಾವು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸೌಲಭ್ಯಗಳಿಂದ ವಂಚಿತರಾಗಬೇಕಾದ ಸಂದರ್ಭ ಎದುರಾಗಲಿದೆ. ಈ ದಿಸೆಯಲ್ಲಿ ಸಮಾಜ ಬಾಂಧವರು ಭವಿಷ್ಯದ ನಮ್ಮ ಸಮಾಹದ ಹಿತವನ್ನು ಗಮನದಲ್ಲಿಟ್ಟುಕೊಂಡು ಗಣತಿ ಸಂದರ್ಭದಲ್ಲಿ ಕೇವಲ ಗಾಣಿಗ ಎಂದೇ ನಮೂದಿಸಬೇಕೆಂದು ಅವರು ಸೂಚನೆ ರವಾನಿಸಿದರು.
ಈ ವೇಳೆ ಸಮಾಜದ ಹಿರಿಯರಾದ ಪ್ರಕಾಶ ಬಾಳೇಕುಂದ್ರಿ, ಗಂಗಾಧರ ಗಿರಿಜಣ್ಣವರ, ಉಲ್ಲಾಸ ಬಾಳೇಕುಂದ್ರಿ, ಮಾರುತಿ ಮೂಡಲಗಿ, ಶಿವರಾಯ ಏಳುಕೋಟಿ ಸೇರಿದಂತೆ ವಿವಿಧ ತಾಲೂಕಿನ ಪದಾಧಿಕಾರಿಗಳು ಹಾಜರಿದ್ದರು.
ಗಾಣಿಗ ಸಮಾಜ ಬಾಂಧವರಿಗೆ ಮಹತ್ವದ ಸೂಚನೆ ರವಾನಿಸಿದ ಗಾಣಿಗರ ಸಭೆ ಉತ್ತರ ಕರ್ನಾಟಕದಲ್ಲಿ ಗಾಣಿಗರದ್ದೇ ಪ್ರಾಬಲ್ಯ
