ಬೆಳಗಾವಿ : ಬೆಳಗಾವಿ ಜಿ.ಎ.ಪದವಿಪೂರ್ವ ಮಹಾವಿದ್ಯಾಲಯದ ಹಿರಿಯ ಶಿಕ್ಷಕ ಪಿ.ಎಸ್.ನಿಡೋಣಿ ಅವರನ್ನು ಸೋಮವಾರ ಆತ್ಮೀಯವಾಗಿ ಬಿಳ್ಕೊಡಲಾಯಿತು.
ಕೆಎಲ್ ಇ ಸಂಸ್ಥೆಯ ಆಜೀವ ಸದಸ್ಯ ಎಂ.ಎಸ್. ಬಳಿಗಾರ ಅವರು ನಿಡೋಣಿ ಅವರ ಸೇವಾ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಅವರೊಬ್ಬ ಆದರ್ಶ ಶಿಕ್ಷಕ. ದೈಹಿಕ ಶಿಕ್ಷಣಕ್ಕಾಗಿದ್ದರೂ ಅವರಿಗೆ ಇತರ ಪಾಠಗಳನ್ನು ಮಕ್ಕಳಿಗೆ ಕಲಿಸುವಷ್ಟು ಆಡಳಿತಾತ್ಮಕವಾದ ಜ್ಞಾನ ಇತ್ತು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸಾದಾ ಉತ್ತೇಜನ ನೀಡುತ್ತಿದ್ದರು. ಮಕ್ಕಳ ಬಗ್ಗೆ ಅಪಾರ ಕಳಕಳಿ ಹಾಗೂ ಪ್ರೀತಿ ಇಟ್ಟುಕೊಂಡಿದ್ದ ಅಪರೂಪದ ಶಿಕ್ಷಕ ಅವರಾಗಿದ್ದರು. ಅತ್ಯಂತ ಸರಳ ಹಾಗೂ ಮೃದು ಸ್ವಭಾವದ ಮೂಲಕ ಎಲ್ಲರ ಮನ ಗೆದ್ದಿದ್ದರು. ನಿಡೋಣಿ ಅವರು ಒಬ್ಬ ಆದರ್ಶ ಹಾಗೂ ಮಾದರಿ ಶಿಕ್ಷಕರು ಎಂದು ಅವರು ಬಣ್ಣಿಸಿದರು.
ಪ್ರಾಚಾರ್ಯ ಆರ್.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ಶಿಕ್ಷಕರಾಗಿದ್ದ ಪಿ.ಎಸ್. ನಿಡೋಣಿ ಅವರು ಒಂದೇ ಸಂಸ್ಥೆಯಲ್ಲಿ ಸುಮಾರು 33 ವರ್ಷಗಳ ಕಾಲ ಸಲ್ಲಿಸಿದ ಸೇವೆ ಅವಿಸ್ಮರಣೀಯ. ದೈಹಿಕ ಶಿಕ್ಷಕರಾದವರಿಗೆ ಶಾಲೆಯ ಮುಖ್ಯ ಶಿಕ್ಷಕರಷ್ಟೇ ಜವಾಬ್ದಾರಿ ಇರುತ್ತದೆ. ಅಂತಹ ಕೆಲಸವನ್ನು ನಿಡೋಣಿ ಮಾಡಿದ್ದಾರೆ. ಮಕ್ಕಳಲ್ಲಿ ಶಿಸ್ತು, ಗೌರವ, ಭಯ, ಭಕ್ತಿ ಮೂಡಿಸುವಲ್ಲಿ ದೈಹಿಕ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ. ಮಕ್ಕಳ ಜೊತೆ ಹೆಚ್ಚಿನ ವೇಳೆ ಬೆರೆಯುವ ದೈಹಿಕ ಶಿಕ್ಷಕರು ಮಕ್ಕಳಲ್ಲಿ ಹುಮ್ಮಸ್ಸು ತರುತ್ತಾರೆ. ಜಿ.ಎ.ಸಂಸ್ಥೆಯಲ್ಲಿ ಅಂತ ಉಲ್ಲೇಖನೀಯ ಕೆಲಸವನ್ನು ನಿಡೋಣಿ ಮಾಡಿದ್ದಾರೆ. ಮಕ್ಕಳ ಆರೋಗ್ಯ ಹಾಗೂ ದೈಹಿಕ ಬೌದ್ಧಿಕ ಪ್ರಗತಿಯಲ್ಲೂ ಅವರ ಸೇವೆ ಶ್ಲಾಘನೀಯ. ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠ ಹುದ್ದೆಯಾಗಿದೆ. ನಾವು ಮಕ್ಕಳ ಮನಸ್ಸಿನಲ್ಲಿ ನಿರಂತರವಾಗಿ ನೆಲೆಯುತ್ತೇವೆ ಎಂದು ಹೇಳಿದರು.
ಸುಮಾರು 33 ವರ್ಷಗಳ ಕಾಲ ಬೆಳಗಾವಿ ಜಿ.ಎ. ದಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪಿ.ಎಸ್. ನಿಡೋಣಿ ಅವರು ತಮ್ಮ ಸೇವಾ ಅವಧಿಯ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಂಡರು. ನಾನು ಯುನಿವರ್ಸಿಟಿ ಬ್ಲೂ ಆಗಿದ್ದೆ. ಕಾಲೇಜು ದಿನಗಳಲ್ಲಿ ಕ್ರೀಡೆಯಲ್ಲಿ ನನಗೆ ಏನನ್ನು ಬೇಕಾದರೂ ಸಾಧಿಸುವಷ್ಟು ಉತ್ಸಾಹ ಇತ್ತು. ಭವಿಷ್ಯದ ಜೀವನದಲ್ಲಿ ದೈಹಿಕ ಶಿಕ್ಷಕನಾಗಿ ಮಕ್ಕಳನ್ನು ತರಬೇತಿಗೊಳಿಸುವುದರಲ್ಲಿ ಪ್ರಾಮಾಣಿಕವಾಗಿ ಸಲ್ಲಿಸಿರುವೆ ಎಂದು ಹೇಳಿದರು.
ಉಪ ಪ್ರಾಚಾರ್ಯ ಸಿ.ಪಿ.ದೇವರ್ಷಿ, ಶಿಕ್ಷಕಿ ವಿ.ಆರ್.ಪಾಟೀಲ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಎಸ್.ಬಿ.ಕೋರೆ ಪ್ರಾರ್ಥಿಸಿದರು. ಶಿಕ್ಷಕಿ ಪಿ.ಎಸ್.ಚಿಮ್ಮಡ ನಿರೂಪಿಸಿದರು. ಶಿಕ್ಷಕಿ ಕೆ.ಆರ್.ಪಟ್ಟಣ ವಂದಿಸಿದರು.
ಶಾಲೆಯ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಪಿ.ಎಸ್. ನಿಡೋಣಿ ಅವರನ್ನು ಸನ್ಮಾನಿಸಿ ಭವಿಷ್ಯದ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು.