ಬೆಳಗಾವಿ: ಬಸವಣ್ಣನವರ ವಚನ ಸಂದೇಶ ಸಾರುವ ಉದ್ದೇಶದಿಂದ ಬಸವ ಜಯಂತಿ ನಿಮಿತ್ತ ಬೆಳಗಾವಿ ನಗರದ ಚನ್ನಮ್ಮ ವೃತ್ತದಿಂದ ನಗರದ ವಿವಿಧ ಗಲ್ಲಿಯಲ್ಲಿ ಜಗಜ್ಯೋತಿ ಬಸವೇಶ್ವರ ಉತ್ಸವ ಜ್ಯೋತಿ ಮೆರವಣಿಗೆ ನಡೆಸಲಾಯಿತು.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಸವಣ್ಣನವರ ಉತ್ಸವದ ನಿಮಿತ್ತ ಕಳೆದ ಒಂದು ವಾರದಿಂದ ವಿವಿಧ ಸಂಘಟನೆಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಇಂದು ಬೃಹತ್ ಮೆರವಣಿಗೆಯನ್ನು ಎಲ್ಲ ಸಂಘಟನೆಗಳು ಕೂಡಿ ನಡೆಸಿದರು. ಕೊನೆಗೆ ಬೃಹತ್ ಮೆರವಣಿಗೆಯು ಆರ್ ಎಲ್ಎಸ್ ಕಾಲೇಜಿನ ಬಳಿ ಕೊನೆಗೊಂಡಿತ್ತು.
ಜಗಜ್ಯೋತಿ ಬಸವೇಶ್ವರ ಉತ್ಸವ ಜ್ಯೋತಿ ಮೆರವಣಿಗೆಗೆ ವಿವಿಧ ಮಠಾದೀಶರು ಚಾಲನೆ ನೀಡಿದರು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಬಸವಾದಿ ಶರಣರ ವಚನ ಸಂದೇಶ ಸಾರುವುದು ಮೆರವಣಿಗೆಯ ಉದ್ದೇಶವಾಗಿತ್ತು.
ಸಂಸ್ಕೃತಿ ಕಲಾ ವಾದ್ಯ, ಮಕ್ಕಳ ಮೂಲಕ ಬಸವಣ್ಣನವರ ವಚನಗಳ ಸಂದೇಶದ ಘೋಷ ವಾಕ್ಯಗಳು, ವಾದ್ಯಮೇಳ , ವಚನ ಸಂಗೀತ ಮೆರವಣಿಗೆಯ ಆಕರ್ಷಿಸಿತು. ಚನ್ನಮ್ಮ ವೃತ್ತದಿಂದ ಬಸವಣ್ಣನವರ ಮೂರ್ತಿ ರೂಪಕ ವಾಹನ ಹೊರಡಿತು. 30 ಕ್ಕೂ ಹೆಚ್ಚು ಮಠಾದೀಶರು, 15 ಕ್ಕೂ ಹೆಚ್ಚು ಸಂಘ- ಸಂಸ್ಥೆಗಳು ಭಾಗವಹಿಸಿದರು.
ಲಿಂಗಾಯತ ಸಂಘಟನೆಗಳು, ಒಳಪಂಗಡಗಳು ಬೇರೆಯಾಗಿವೆ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡಿದೆ. ಹೀಗಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸಲು ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಬಸವ ಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಜಗದೀಶ ಶೆಟ್ಟರ್, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೊರೆ, ಶಾಸಕರಾದ ಆಸೀಫ್ ಸೇಠ್, ಬಾಬಾಸಾಹೇಬ್ ಪಾಟೀಲ್, ದುರ್ಯೋಧನ ಐಹೊಳೆ, ಮಾಜಿ ಎಂಎಲಸ್ ಸಿ ಮಹಾಂತೇಶ ಕವಟಗಿಮಠ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.