ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮುಂದಿನ ದಿನಗಳಲ್ಲಿ ಬೆಳಗಾವಿ – ಬೆಂಗಳೂರು ನಡುವೆ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಲು ಮನವಿ ಸಲ್ಲಿಸಲಾಯಿತು. ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಕೈಗಾರಿಕೆ , ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸುತ್ತಿದೆ. ರಾಜ್ಯದ ಎರಡನೇ ರಾಜಧಾನಿಯಾದ ಬೆಳಗಾವಿ ಹಾಗೂ ರಾಜಧಾನಿ ಬೆಂಗಳೂರಿಗೆ ವಂದೇ ಭಾರತ್ ರೈಲು ಅವಶ್ಯಕತೆ ಇದ್ದು ಈ ಮನವಿಯನ್ನು ವಿಶೇಷವಾಗಿ ಪರಿಗಣಿಸಿ ಪ್ರಾರಂಭಿಸುವಂತೆ ಒತ್ತಾಯಿಸಲಾಯಿತು. ಬೆಳಗಾವಿಯ ನೂತನ ರೈಲ್ವೆ ನಿಲ್ದಾಣದ ಉದ್ಘಾಟನೆ ಹಾಗೂ ಬೆಳಗಾವಿ – ಕಿತ್ತೂರು – ಧಾರವಾಡ ಮಾರ್ಗದ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ನೆರವೇರಿಸುವ ಬಗ್ಗೆ ಚರ್ಚಿಸಲಾಯಿತು. ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಶೀಘ್ರ ನರೇಂದ್ರ ಮೋದಿ ಅವರ ಜೊತೆಗೆ ಸಮಾಲೋಚಿಸುವುದಾಗಿ ಹೇಳಿದರು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಕುರಿತಾದ ಮನವಿಯನ್ನು ಅವಶ್ಯಕವಾಗಿ ಪರಿಗಣಿಸುವುದಾಗಿ ಹೇಳಿದರು.
ಬೆಳಗಾವಿ/ದೆಹಲಿ :
ವಂದೇ ಭಾರತ ರೈಲು ಬೆಳಗಾವಿ ವರೆಗೂ ವಿಸ್ತರಣೆ ಮಾಡಬೇಕು ಎಂದು ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಕೇಂದ್ರ ಸರಕಾರದ ಮೇಲೆ ಇದೀಗ ಒತ್ತಡ ಹೇರಿದ್ದಾರೆ.
ಈ ಬಗ್ಗೆ ಅವರು ಕೇಂದ್ರ ರೈಲ್ವೆ ಸಚಿವ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಂಡಿಸಿದ್ದಾರೆ. ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿದೆ. ಬೆಳಗಾವಿಯಲ್ಲಿ ಸ್ವಾತಂತ್ರ್ಯಪೂರ್ವದ ವಿಮಾನ ನಿಲ್ದಾಣವಿದೆ. ಗೋವಾ ವಿಮುಕ್ತಿ ಕಾಲದಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದಲೇ ಕಾರ್ಯಾಚರಣೆ ಗೊಳಿಸಿ ಆ ರಾಜ್ಯವನ್ನು ಪೋರ್ಚುಗೀಸರಿಂದ ಮುಕ್ತಿಗೊಳಿಸಲಾಗಿದೆ. ಎಲ್ಲಾ ಅಂಶಗಳನ್ನು ಪರಿಗಣಿಸಿದರೆ ಬೆಳಗಾವಿ ಈಗಿರುವ ಮಹತ್ವದ ಅರಿವಾಗುತ್ತದೆ. ಜತೆಗೆ ಭಾರತದಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದೆ. ಒಂದೂವರೆ ದಶಕದ ಹಿಂದೆ ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ನಡೆಯಲು ಆರಂಭಿಸಿದ ನಂತರ ಅತ್ಯಂತ ತ್ವರಿತಗತಿಯಲ್ಲಿ ಈ ಮಹಾನಗರ ಬೆಳವಣಿಗೆ
ನಾಗಾಲೋಟದಲ್ಲಿದೆ. ಇವೆಲ್ಲಾ ಅಂಶವನ್ನು ಕೇಂದ್ರ ಸರಕಾರ ಗಮನಿಸಬೇಕು ಎಂದು ಅವರು ಸಚಿವರಿಗೆ ಮನವರಿಕೆ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ ಅವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು. ಜತೆಗೆ ಬೆಳಗಾವಿಯಿಂದ ಧಾರವಾಡಕ್ಕೆ ಕಿತ್ತೂರು ಮೂಲಕ ಹಾಯ್ದು ಹೋಗುವ ಹೊಸ ರೈಲು ಮಾರ್ಗದ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅವರಿಂದ ನೆರವೇರಿಸುವ ಬಗ್ಗೆಯೂ ಚರ್ಚಿಸಲಾಯಿತು.