ರಾಂಚಿ : ಜಾರ್ಖಂಡ್ನ ಕೊಡರ್ಮಾದಲ್ಲಿ ನಡೆದ ಅಸಾಧಾರಣ ವಿದ್ಯಮಾನವೊಂದರಲ್ಲಿ, 15 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಅವರ ಕುಟುಂಬದವರು ಇತ್ತೀಚೆಗೆ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಪತ್ತೆಯಾಗಿದ್ದಾರೆ…! ಆಶ್ಚರ್ಯಕರ ಎಂಬಂತೆ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಗೆ “ಮಹಾ ಕುಂಭ” ಪದ ಕೇಳಿದ ನಂತರ ಅವರ ನೆನಪಿನ ಶಕ್ತಿ ಮರಳಿದೆ. ಇದು ಅಧಿಕಾರಿಗಳಿಗೆ ಅವರ ಕುಟುಂಬವನ್ನು ಪತ್ತೆಹಚ್ಚಲು ನೆರವಾಗಿದೆ ಎಂದು ವರದಿಯಾಗಿದೆ.
ಜನವರಿ 7 ರಂದು ಕೊಡೆರ್ಮಾದ ಮರ್ಕಚೋ ಪೊಲೀಸ್ ಠಾಣೆಗೆ ಆಗಮಿಸಿದ ವ್ಯಕ್ತಿಯ ಕುಟುಂಬವು ಸುಮಾರು 15 ವರ್ಷಗಳ ನಂತರ ತಮ್ಮ ಕುಟುಂಬದ ಮುಖ್ಯಸ್ಥನನ್ನು ಕಂಡ ನಂತರ ಅವರ ಸಂತೋಷ ಉಮ್ಮಳಿಸಿತು.
ಮರ್ಕಾಚೊ ಪೊಲೀಸ್ ಠಾಣಾ ವ್ಯಾಪ್ತಿಯ ಕಡೋಡಿಹ್ ನಿವಾಸಿಯಾದ ಪ್ರಕಾಶ ಮಹತೋ ಎಂಬವರು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ಉದ್ಯೋಗಿಯಾಗಿದ್ದರು. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಮಹತೋ ಅವರು ಮೇ 9, 2010 ರಂದು ಕೆಲಸಕ್ಕೆ ರೈಲಿನಲ್ಲಿ ಕೋಲ್ಕತ್ತಾಗೆ ಪ್ರಯಾಣಿಸುವಾಗ ನಾಪತ್ತೆಯಾಗಿದ್ದರು. ಅವರ ಕುಟುಂಬವು ಮರ್ಕಾಚೊ ಪೊಲೀಸ್ ಠಾಣೆಯಲ್ಲಿ ಅವರು ಕಾಣೆಯಾದ ಬಗ್ಗೆ ದೂರು ದಾಖಲಿಸಿತ್ತು. ಪೋಲೀಸರು ಮತ್ತು ಕುಟುಂಬದವರು ಎಷ್ಟೇ ಹುಡುಕಾಟ ನಡೆಸಿದರೂ, ಮಹತೋ ಪತ್ತೆಯಾಗಿರಲಿಲ್ಲ.
ಎರಡು ದಿನಗಳ ಹಿಂದೆ, ಮರ್ಕಾಚೊ ಪೊಲೀಸ್ ಠಾಣೆಯ ಉಸ್ತುವಾರಿ 15 ವರ್ಷಗಳಿಂದ ಕಾಣೆಯಾಗಿದ್ದ ಪ್ರಕಾಶ ಮಹತೋ ಅವರ ಕುಟುಂಬವನ್ನು ಸಂಪರ್ಕಿಸಿ, ಮಹತೋ ಪತ್ತೆಯಾಗಿದ್ದರ ಬಗ್ಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕುಟುಂಬವು ಪಶ್ಚಿಮ ಬಂಗಾಳದ ರಾಣಿಗಂಜ್ನಲ್ಲಿರುವ ಹೋಟೆಲ್ಗೆ ಪ್ರಯಾಣ ಬೆಳೆಸಿತು.
ಅಲ್ಲಿ ಪ್ರಕಾಶ ಮಹತೋ ಅವರನ್ನು ಭೇಟಿಯಾದ ನಂತರ, ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪ್ರಕಾಶ ಮಹತೋ ಅವರಿಗೆ 15 ವರ್ಷಗಳ ಹಿಂದೆ ತಮ್ಮ ತಂದೆ ಹೊಟೇಲ್ನಲ್ಲಿ ಉದ್ಯೋಗ ನೀಡಿದ್ದರು ಎಂದು ಹೊಟೇಲ್ ನಿರ್ವಾಹಕ ಸುಮಿತ್ ಸಾವೊ ಕುಟುಂಬಕ್ಕೆ ತಿಳಿಸಿದರು.
ಹೊಟೇಲ್ನಲ್ಲಿ ಕೆಲಸ ಸಿಕ್ಕ ನಂತರ ತಮ್ಮ ಕೆಲಸದ ಬಗ್ಗೆ ಮಹತೋ ಅವರ ಬದ್ಧತೆ ಮತ್ತು ಮಾಲೀಕರ ಬಗೆಗಿನ ನಿಷ್ಠೆ ಅವರು ಹೊಟೇಲ್ ಮಾಲೀಕರ ಕುಟುಂಬದ ಸದಸ್ಯರಂತೆ ಆಗಲು ಕಾರಣವಾಯಿತು ಎಂದು ಸುಮಿತ್ ಸಾವೊ ಹೇಳಿದ್ದಾರೆ. ಸುಮಿತ್ ತಮ್ಮ ತಂದೆಯ ಮರಣದ ನಂತರ ಕಳೆದ ಏಳು ವರ್ಷಗಳಿಂದ ಹೊಟೇಲ್ ನಡೆಸುತ್ತಿದ್ದಾರೆ.
ಸುಮಿತ್ ಪ್ರಕಾರ, ಕೆಲವು ದಿನಗಳ ಹಿಂದೆ, ಸುಮಿತ್ ಕುಟುಂಬವು ಮಹಾಕುಂಭಕ್ಕೆ ಹೋಗುವ ಬಗ್ಗೆ ಚರ್ಚಿಸುತ್ತಿತ್ತು. ಈ ವೇಳೆ ಸುಮಿತ್ ಅವರು ಮಹತೋ ಅವರಿಗೂ ಮಹಾಕುಂಭಕ್ಕೆ ಪ್ರಯಾಣಿಸಲು ವ್ಯವಸ್ಥೆ ಮಾಡಿಕೊಡಲು ಮುಂದಾದರು.
ಈ ಮಾತುಕತೆಯ ಸಮಯದಲ್ಲಿ, ಪ್ರಕಾಶ ಮಹತೋ ಅವರು ಕುಂಭಮೇಳಕ್ಕೆ ಖಂಡಿತವಾಗಿಯೂ ಹೋಗುತ್ತೇನೆ ಎಂದು ತಿಳಿಸಿದರು. ಯಾಕೆಂದರೆ ತಮ್ಮ ಮನೆ ಅಲ್ಲಿಗೇ ಹೋಗುವ ಮಾರ್ಗದಲ್ಲೇ ಇದೆ ಎಂದು ಹೇಳಿದರು. ಮಹತೋ ಅವರಿಗೆ ಹಳೆಯ ನೆನೆಪು ಮರುಕಳಿಸಿದಂತೆ ಕಂಡುಬಂದಾಗ ಸುಮಿತ್ ಈ ಬಗ್ಗೆ ಮತ್ತಷ್ಟು ಪ್ರಶ್ನಿಸಿದರು, ಆ ಸಮಯದಲ್ಲಿ ಮಹತೋ ತನ್ನ ವಿಳಾಸ ಕೊಡೆರ್ಮಾದ ಮಾರ್ಕಾಚೋ ಎಂದು ಹೇಳಿದರು. ಸುಮಿತ್ ನಂತರ ಈ ಬಗ್ಗೆ ಕೊಡರ್ಮಾ ಪೊಲೀಸ್ ಠಾಣೆ ಸಂಪರ್ಕಿಸಿದರು. ನಂತರ ಮರ್ಕಚೊ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು.
ಶುಕ್ರವಾರ, ಮರ್ಕಚೊ ಪೊಲೀಸ್ ಠಾಣೆಯ ಠಾಣಾಧಿಕಾರಿಯು ಠಾಣೆಯಲ್ಲಿ ಪ್ರಕಾಶ ಮಹತೋ (52) ಅವರನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ಅವರ ಪತ್ನಿ ಗೀತಾದೇವಿ, ಮಗ ಸುಜಲ್ (18) ಮತ್ತು ಮಗಳು ರಾಣಿ (16) ಅವರನ್ನು ನೋಡಿ ಹರ್ಷ ವ್ಯಕ್ತಪಡಿಸಿದರು. ಪ್ರಕಾಶ ಮಹತೋ ನಾಪತ್ತೆಯಾದಾಗ ಅವರ ಮಗ ಸುಜಲ್ಗೆ ಮೂರು ವರ್ಷ ಮತ್ತು ಮಗಳು ರಾಣಿಗೆ ಕೇವಲ ಮೂರು ತಿಂಗಳು. ಮಕ್ಕಳು ತಮ್ಮ ತಂದೆಯನ್ನು ಫೋಟೋದಲ್ಲಿ ಮಾತ್ರ ನೋಡಿದ್ದಾಗಿ ತಿಳಿಸಿದ್ದಾರೆ. ಪತಿ ನಾಪತ್ತೆಯಾದ ನಂತರ ಗೀತಾದೇವಿ ಕೂಲಿನಾಲಿ ಮಾಡಿ ತಮ್ಮ ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸಿದರು.
ಸುಮಾರು 10 ದಿನಗಳ ಹಿಂದೆ, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್ ಮಹತೋ ಅವರಿಗೆ ನೀಡಬೇಕಾದ ಬಾಕಿ ಹಣದ ಕುರಿತು ಮುನ್ಸಿಪಲ್ ಕಾರ್ಪೊರೇಷನ್ ಮಹತೋ ಕುಟುಂಬಕ್ಕೆ ಪತ್ರವನ್ನು ಕಳುಹಿಸಿದೆ ಎಂದುಕುಟುಂಬ ಸದಸ್ಯರು ಹೇಳಿದ್ದಾರೆ.
ಸರ್ಕಾರಿ ನಿಯಮಗಳ ಪ್ರಕಾರ, ಏಳು ವರ್ಷಗಳಿಂದ ಕಾಣೆಯಾದ ವ್ಯಕ್ತಿಯನ್ನು ಕಾನೂನುಬದ್ಧವಾಗಿ ಮೃತರು ಎಂದು ಭಾವಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಅವರ ಅವಲಂಬಿತರು ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕೆ ಅರ್ಹರಾಗುತ್ತಾರೆ. ಹೀಗಾಗಿ ಪ್ರಕಾಶಮಹತೋ ಕುಟುಂಬವು ವಲಯ ಕಚೇರಿಯಲ್ಲಿ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿತು. ಆದರೆ, ಅಪೂರ್ಣ ದಾಖಲಾತಿಯಿಂದಾಗಿ ಅರ್ಜಿಯು ಪ್ರಸ್ತುತ ಬಾಕಿ ಉಳಿದಿದೆ.