ಬೆಳಗಾವಿ : ಬೆಳಗಾವಿ ಜಿಲ್ಲೆಯ ಮಹಿಳೆಯೊಬ್ಬಳ ಇನ್ಸ್ಟಾಗ್ರಾಂ ಪ್ರೀತಿ-ಪ್ರಣಯ ಕೊನೆಗೂ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಮೂಲದ ಭಾಗ್ಯಶ್ರೀ ಹಾಗೂ ಇಬ್ರಾಹಿಂ ದರಸಾಬ ಎಲಿಗಾರ ಬಂಧಿತರು. ಅ.6ರಂದು ಆರೋಪಿತರನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸಿದಾಗ ಇಬ್ರಾಹಿಂನ ಜತೆಗೂಡಿ ಯುವಕನ ಕೊಲೆ ಮಾಡಿರುವುದಾಗಿ ಭಾಗ್ಯಶ್ರೀ ಒಪ್ಪಿಕೊಂಡಿದ್ದಾರೆ.
ಘಟನೆ ಹಿನ್ನೆಲೆ : ನಡೆದಿದ್ದಾದರೂ ಎಲ್ಲಿ ಗೊತ್ತೇ ?:
ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ ಗ್ರಾಮದ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇನ್ಸ್ಟಾಗ್ರಾಮ್ ನಿಂದ ಆರಂಭವಾದ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಈ ಪ್ರಕರಣದಲ್ಲಿ ಮಹಿಳೆ, ಹಾಲಿ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ್ನು ಹತ್ಯೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ತ್ರಿಶಂಕು ಸ್ಥಿತಿಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಕುಷ್ಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಮುಗಳಖೋಡ ಗ್ರಾಮದ ಮಹಿಳೆ ಭಾಗ್ಯಶ್ರೀ ಹನುಮಂತ ಢೋಣಿ ಹಾಗೂ ಆಕೆಯ ಹಾಲಿ ಪ್ರಿಯಕರ ಇಬ್ರಾಹಿಂಸಾಬ್ ದರಸಾಬ್ ಎಲಿಗಾರ ಕೊಲೆ ಆರೋಪಿಗಳು. ಪತಿಯನ್ನು ಕಳೆದುಕೊಂಡಿದ್ದ ಭಾಗ್ಯಶ್ರೀಗೆ ಮೂರು ಮಕ್ಕಳಿದ್ದು, ಸಾಮಾಜಿಕ ಜಾಲತಾಣದ ಮೂಲಕ ಹಿರೇಮನ್ನಾಪುರ ಯುವಕ ಶರಣಪ್ಪ ಶಿವಪ್ಪ ಮಸ್ಕಿ ಎಂಬುವನ ಪರಿಚಯವಾಗಿತ್ತು.
ಶರಣಪ್ಪ ಮಸ್ಕಿ ತನಗೆ ಪ್ರತಿ ದಿನ 6 ಸಾವಿರ ಆದಾಯವಿದೆ ಎಂದು ಹೇಳಿ, ಭಾಗ್ಯಶ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಶರಣಪ್ಪ ಮಸ್ಕಿ ಕೂಲಿ ಕಾರ್ಮಿಕ ಎನ್ನುವ ನಿಜಸ್ಥಿತಿ ಗೊತ್ತಾಗಿ ದೂರವಿದ್ದಾಗ್ಯೂ ಶರಣಪ್ಪ ಮಸ್ಕಿ, ಭಾಗ್ಯಶ್ರೀ ಜತೆಗಿನ ಚಿತ್ರಗಳನ್ನು ಎಡಿಟ್ ಮಾಡಿ ಮಾರ್ಫಿಂಗ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹರಿಬಿಡುತ್ತಿದ್ದ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರೋಸಿ ಹೋಗಿದ್ದ ಭಾಗ್ಯ ಶ್ರೀ, ಶರಣಪ್ಪ ಮಸ್ಕಿಗೆ ಎಚ್ಚರಿಕೆ ನೀಡಿದ್ದರೂ ಮಾತು ಕೇಳಿರಲಿಲ್ಲ. ಇದನ್ನು ಸಹಿಸದ ಭಾಗ್ಯಶ್ರೀ ಒಮ್ಮೆ ಹಿರೇಮನ್ನಾಪುರಕ್ಕೆ ಬಂದು ಮೊಬೈಲ್ ಕಸಿದುಕೊಂಡು ಹೋಗಿದ್ದರೂ, ಶರಣಪ್ಪ ಮಸ್ಕಿ ಹಳೆ ಚಾಳಿ ಮುಂದುವರಿಸಿದ್ದ. ಭಾಗ್ಯಶ್ರೀ ಹಾಲಿ ಪ್ರಿಯಕರ ಇಬ್ರಾಹಿಂಸಾಬ್ ಎಲಿಗಾರನೊಂದಿಗೆ ಸೆಪ್ಟಂಬರ್ 29ರಂದು ಮುಗಳಖೋಡ ನಿಂದ ಬೈಕಿನಲ್ಲಿ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರಕ್ಕೆ ಬಂದು, ಶರಣಪ್ಪ ಮಸ್ಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಾಕ್ಷಿ ನಾಶಕ್ಕೆ ಹಾಸಿಗೆಯಲ್ಲಿ ಸುತ್ತಿ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ತ್ರಿಶಂಕು ಸ್ಥಿತಿಯ ಈ ಕೊಲೆ ಪ್ರಕರಣವನ್ನು ಕುಷ್ಟಗಿ ಪೊಲೀಸರು ಬೇಧಿಸಿ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೊಲೆಗೈದ ಇಬ್ಬರನ್ನೂ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.