ಬೆಂಗಳೂರು:
ಮತದಾನ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಒಂದು ಸಣ್ಣ ಲವ್ ಸ್ಟೋರಿ ಬರೆದಿದೆ.
ಹಾಯ್, ಹೇಗಿದ್ದೀಯಾ, ನಾನು ತುಂಬಾ ಯೋಚನೆ ಮಾಡಿ ಈ ಲೆಟರ್ ಬರೆಯುತ್ತಿದ್ದೇನೆ…ಎಂದು ಆರಂಭಗೊಳ್ಳುವ ಲವ್ ಲೆಟರ್ ನೀನು ನನಗೆ ಬೇಕೇ ಬೇಕು, ನನಗಾಗಿ ಹುಟ್ಟಿದ್ದು ನೀನು ಎಂದು ಕೊನೆಗೊಳ್ಳುತ್ತದೆ.
ಶೀತಲ್ ಶೆಟ್ಟಿ ಅವರ ಧ್ವನಿಯಲ್ಲಿ ಮೂಡಿಬಂದಿರುವ ಈ ಸ್ಟೋರಿಯಲ್ಲಿ ಮತದಾನವನ್ನು ವಿಶೇಷ ರೀತಿಯಲ್ಲಿ ಅರಿವು ಮೂಡಿಸಲಾಗಿದೆ.
ಸ್ಟೋರಿಯ ಒಕ್ಕಣೆ ಹೀಗಿದೆ…
Hi.. ಹೇಗಿದ್ದೀಯಾ?
ತುಂಬಾ ಯೋಚನೆ ಮಾಡಿ ಈ letter ಬರೀತಾ ಇದೀನಿ.
ನೀನ್ ಹೋದ್ಮೇಲೆ ನಾನ್ ತುಂಬಾ ಬದ್ಲಾಗಿದ್ದೀನಿ ಅನ್ನಿಸ್ತಿದೆ. ಕೂತ್ರೆ ನಿಂತ್ರೆ ಏನೇ ಮಾಡಿದ್ರು ನಿಂದೆ ಯೋಚನೆ ಆಗೋಗಿದೆ.
ನೀನ್ ಯಾವಾಗ್ ಬರ್ತಿಯಾ ಅಂತ ಕಾಯ್ತಾನೇ ಇದೀನಿ. ಹೌದು, ನಾನ್ ಒಪ್ಕೋತೀನಿ. ನಾನ್ ತಪ್ಪು ಮಾಡ್ತೀನಿ. ಕೆಲವು ಸಲ ಕೆಲವು ವಿಷಯಗಳು ಗೊತ್ತಾಗಲ್ಲ ನಂಗೆ.
ನೀನ್ ಏನು? ನಿನ್ನ importance ಏನು ಅನ್ನೋದು ಅರ್ಥ ಮಾಡ್ಕೊಳೋದಕ್ಕು
ನೀನ್ ಯಾವಾಗ್ಲೂ ಹೇಳ್ತಿದ್ದೆ.
ಜವಾಬ್ದಾರಿ ಕಲಿತ್ಕೋ, ಚಿಕ್ಕ ಮಕ್ಕಳ ತರ ಆಡಬೇಡ, ಯೋಚನೆ ಮಾಡು ನಿಂಗ್ ಏನ್ ಬೇಕೊ ಅದನ್ನೇ ಮಾಡು, ದುಡ್ಡಿನ ಹಿಂದೆ ಹೋಗ್ಬೇಡ ಅಂತ.
ಸ್ವಲ್ಪ time ಬೇಕಲ್ವಾ?
ಈ ಸಲ ನಾನ್ ಅದೆಲ್ಲವನ್ನೂ ಮಾಡ್ತೀನಿ. ನಿನ್ ಮಾತ್ ಕೇಳ್ತಿನಿ. ನೀನ್ last time ಬಂದಾಗ ಮನಸ್ಸಿಗೆ ಏನೊ ಒಂಥರಾ ಸಂಭ್ರಮ ಆದ್ರೂನು ಜೊತೆ ಜೊತೆಗೆ ಆತಂಕ, ಕಳವಳ, ನಿನ್ ಪ್ರೀತಿಲಿ ತಪ್ಪು ಮಾಡಬಾರದು ಅನ್ನೊ ಜವಾಬ್ದಾರಿ. ಇವತ್ತಿಗೂ ಆ ಕಲೆ ನೆನಸ್ಕೊಂಡ್ರೆ ನನಗೆ ಕೆನ್ನೆ ಕೆಂಪಾಗತ್ತೆ. ಹೋಗ್ಲಿ ಬಿಡು. ಆದ್ರೆ ಅದಾಗಿ ನೀ ಬಿಟ್ಟು ಹೋದಾಗಿಂದ ನನ್ ಮನದಲ್ಲಿ ಅದೆಷ್ಟು ಸಲ ನೀನ್ ಬಂದ್ ಹೋದ್ಯೋ.
ಒಂದ್ ಮಾತ್ ಹೇಳ್ತೀನಿ ಕೇಳು.
ನನ್ನೆಲ್ಲಾ ಜೀವನದ ಆಗು ಹೋಗುಗಳ ಸುತ್ತ ನಿನ್ ನೆರಳು ಇದ್ದೆ ಇರತ್ತೆ. ಅಷ್ಟೇ ಯಾಕೆ ನನ್ನೆಲ್ಲ ಅಸಹಾಯಕತೆಯಲ್ಲೂ ನೀನ್ ಇದೀಯಾ,
ರಸ್ತೆ ಮೇಲಿನ ಚಿಕ್ಕ ಚಿಕ್ಕ ಮಕ್ಕಳನ್ನ ನೋಡ್ಡಾಗ, ಮಳೆ ಬಂದಾಗ, ಬಿಸಿಲು ಹೆಚ್ಚಾದಾಗ, ರೈತರನ್ನ ನೋಡ್ಡಾಗ, ಹೆಣ್ಣು ಮಕ್ಕಳನ್ನ ನೋಡ್ಡಾಗ, ದ್ವಿಲಿಂಗಿಗಳನ್ನ ನೋಡ್ಡಾಗ, ಅಶಕ್ತರನ್ನ ನೋಡ್ಡಾಗ ಎಲ್ಲಾ ಸಲವೂ ನಿನ್ ಮಾತ್ ನೆನಪಾಗ್ತಾ ಇರತ್ತೆ. ಹೀಗೆ ಎಲ್ಲೆಲ್ಲೂ ನೀನೆ ಕಾಣಿಸ್ತಾನೆ ಇರ್ತಿಯ.
ಯೋಚನೆ ಮಾಡು. ನಿನ್ ಅಸ್ತಿತ್ವ ನನ್ lifeಲ್ಲಿ ಎಷ್ಟರ ಮಟ್ಟಿಗೆ ಇದೆ ಅಂತ, ಆದ್ರೆ ಈ ಸಲ ನಾನು ನಿರ್ಧಾರ ಮಾಡಿದೀನಿ. ನಾನು ನಿನ್ನನ್ನ ಈ ಸಲ ಸುಮ್ನೆ ಹೋಗೋದಕ್ಕೆ ಬಿಡೋದಿಲ್ಲ. ನೀನು ನನಗೆ ಬೇಕೆ ಬೇಕು. ನನಗಾಗೇ ಹುಟ್ಟಿದ್ದು ನೀನು.
ನೀನು ನನ್ನ VOTE. ನೀನೇ ನನ್ನ ಹಕ್ಕು.