ಬೆಳಗಾವಿ : ರಾಯಬಾಗ ತಾಲೂಕು ಕುಡಚಿಯಿಂದ ಹೈದರಾಬಾದಿಗೆ ಲಾರಿಯಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಅರಿತ ಸಾರ್ವಜನಿಕರು ಲಾರಿಗೆ ಬೆಂಕಿ ಹಚ್ಚಿದ ಘಟನೆ ಕಾಗವಾಡ ತಾಲೂಕು ಐನಾಪುರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಐನಾಪುರದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿ ಬಳಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಲಾರಿಯನ್ನು ನಾಗರಿಕರು ಅಡ್ಡಗಟ್ಟಿದ್ದಾರೆ. ಚಾಲಕನನ್ನು ವಿಚಾರಿಸಿ ಪರಿಶೀಲಿಸಿದಾಗ ಅಪಾರ ಪ್ರಮಾಣದಲ್ಲಿ ಗೋಮಾಂಸ ಇರುವುದು ಕಂಡುಬಂದಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಲಾರಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಆಗಮಿಸುವಷ್ಟರಲ್ಲಿ ಲಾರಿ ಬೆಂಕಿಗೆ ಆಹುತಿಯಾಗಿದೆ. ಲಾರಿಯಲ್ಲಿ ಸುಮಾರು ಐದು ಟನ್ನಿಗೆ ಹೆಚ್ಚು ಗೋಮಾಂಸ ಇತ್ತು ಎನ್ನಲಾಗಿದೆ. ಕಾಗವಾಡ ಪಿಎಸ್ ಐ ರಾಘವೇಂದ್ರ ಖೋತ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉಗಾರ ಸಕ್ಕರೆ ಕಾರ್ಖಾನೆ ಮತ್ತು ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.
ರೊಚ್ಚಿಗೆದ್ದ ಸಾರ್ವಜನಿಕರಿಂದ ಲಾರಿಗೆ ಬೆಂಕಿ
