ಬೆಳಗಾವಿ ಜೈಲಿನಲ್ಲಿರುವ ಸರಣಿ ಅತ್ಯಾಚಾರ, ದರೋಡೆ, ಕೊಲೆ ಪ್ರಕರಣಗಳ ಅಪರಾಧಿ ವಿಕೃತ ಕಾಮಿ ಉಮೇಶ ರೆಡ್ಡಿ ಅಲಿಯಾಸ್ ಬಿ.ಎ. ಉಮೇಶಗೆ ಇದೀಗ ಸುಪ್ರೀಂ ಕೋರ್ಟ್ ಮರಣದಂಡನೆಯಿಂದ ವಿನಾಯಿತಿ ನೀಡಿ 30 ವರ್ಷ ಕಾಲ ಜೈಲು ಶಿಕ್ಷೆ ಅನುಭವಿಸುವಂತೆ ಮಹತ್ವದ ತೀರ್ಪು ನೀಡಿದೆ.
ಬೆಳಗಾವಿ :
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ
ಶಿಕ್ಷೆ ಅನುಭವಿಸುತ್ತಿರುವ ವಿಕೃತಕಾಮಿ ಉಮೇಶ ರೆಡ್ಡಿಗೆ ಕೊನೆಗೂ ಜೀವದಾನ ಲಭಿಸಿದೆ.
ಉಮೇಶ ರೆಡ್ಡಿ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಜೀವಾವಧಿಗೆ ಇಳಿಸಿದೆ.
ಮುಖ್ಯ ನ್ಯಾಯಮೂರ್ತಿ ಯು. ಯು. ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಬೇಲಾ ಎಂ.ತ್ರಿವೇದಿ ಅವರಿದ್ದ ಪೀಠ ಈ ತೀರ್ಪು ನೀಡಿದೆ. ವಿಚಾರಣಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ ಉಮೇಶ ರೆಡ್ಡಿ ಹತ್ತು ವರ್ಷಗಳಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಹತ್ತು ವರ್ಷ ಜೈಲಿನ ಕತ್ತಲ ಕೋಣೆಯಲ್ಲಿ ಇರಿಸಿದ ಬಗ್ಗೆ ಕೋರ್ಟ್ ಇದೀಗ ಅಸಮಾಧಾನ ವ್ಯಕ್ತಪಡಿಸಿದೆ.
ಹತ್ತು ವರ್ಷಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಉಮೇಶ ರೆಡ್ಡಿಯನ್ನು ಏಕಾಂತವಾಗಿ ಬಂಧನದಲ್ಲಿ ಇಟ್ಟಿರುವುದು ಕಾನೂನು ಉಲ್ಲಂಘನೆ. ಇದು ಆತನ ಕ್ಷೇಮಾಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಉಮೇಶ ರೆಡ್ಡಿಗೆ ಕನಿಷ್ಠ ಮೂವತ್ತು ವರ್ಷಗಳ ಶಿಕ್ಷೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಆತನಿಗೆ ತಾಕೀತು ಮಾಡಿದೆ.
ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಉಮೇಶ ರೆಡ್ಡಿಗೆ 2006 ರಲ್ಲಿ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. 2006 ರಿಂದ 2016 ರವರೆಗೆ ಹತ್ತು ವರ್ಷ ಕಾಲ ಬೆಳಗಾವಿಯ ಕತ್ತಲ ಕೋಣೆಯಲ್ಲಿ ನನ್ನನ್ನು ಇಡಲಾಗಿತ್ತು ಎಂದು ಆತ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದ. ಕಾನೂನು ಉಲ್ಲಂಘಿಸಿ ಏಕಾಂತದ ಬಂಧನದಲ್ಲಿರಿಸಿದ್ದು ತನ್ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಅಪರಾಧಿ ಅರ್ಜಿ ಸಲ್ಲಿಸಿದ್ದ. 2006 ರಲ್ಲಿ ತನಗೆ ಮರಣದಂಡನೆ ವಿಧಿಸಿದನಿಂದಲೂ ಏಕಾಂತದ ಬಂಧನದಲ್ಲಿಟ್ಟಿದ್ದನ್ನು ಆತ ಪ್ರಶ್ನಿಸಿದ್ದ.
ಇದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಇದೀಗ ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ತಿಳಿಸಿ ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ.