ಬೆಳಗಾವಿ : ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದ ಕ್ರಾಸ್ನಲ್ಲಿ ಬುಧವಾರ ರಾತ್ರಿ ಜೀಪ್ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. 20 ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಚುಂಚನೂರು ಗ್ರಾಮದ ಕೆಂಚಪ್ಪ ಈರಣ್ಣವರ (50) ಸ್ಥಳದಲ್ಲೇ ಮೃತಪಟ್ಟರು. ಬಸಪ್ಪ (16) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಕೊನೆಯುಸಿರೆಳೆದರು. ಗಾಯಗೊಂಡವರನ್ನು ಸವದತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ 27 ಜನ ಕೃಷಿ ಕೂಲಿ ಕೆಲಸಕ್ಕೆ ನವಲಗುಂದ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ತೆರಳಿದ್ದರು. ಕೂಲಿ ಕೆಲಸ ಮುಗಿಸಿ ಸ್ವಗ್ರಾಮಕ್ಕೆ ಮರಳುವಾಗ, ವೇಗವಾಗಿ ಚಲಿಸುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸವದತ್ತಿ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ನೇರವಾದರು.