ಬೆಳಗಾವಿ : ಹೆಂಡತಿಯನ್ನು ಕೊಲೆ ಮಾಡಿದ ಗಂಡನಿಗೆ ಇಲ್ಲಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.
ಮುಗಳಖೋಡ ಗ್ರಾಮದ ಅಣ್ಣಪ್ಪ ಅಪ್ಪಾ ಸಾಬ ಖಿಚಡಿ (56) ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿ. ಈತ ತನ್ನ ಪತ್ನಿ ಕಲ್ಲವ್ವ @ ಕಲಾವತಿ (50) ಬೇರೆ ಗಂಡಸರ ಜೊತೆ ಮಾತನಾಡುತ್ತಾಳೆ, ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಸಂಶಯ ಹೊಂದಿದ್ದ.
ಸುಮಾರು ಎರಡು ವರ್ಷಗಳ ಕಾಲ ಇದೇ ಕಾರಣಕ್ಕೆ ಆಕೆಯನ್ನು ಹೊಡೆದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತ ಬಂದಿದ್ದ. ಅದೇ ಸಂಶಯದಿಂದ ಹಾರೂಗೇರಿ ಪೊಲೀಸ್ ಠಾಣೆಯ ತನ್ನ ಮಾಲ್ಕಿ ಜಮೀನಿನಲ್ಲಿಯ ಗುಡಿಸಲಿನಲ್ಲಿ 2019 ರ ಮಾರ್ಚ್ 7 ರಂದು ರಾತ್ರಿ 10 ಗಂಟೆಗೆ ಆತ ಹೆಂಡತಿಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದ. ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಉಪಚಾರ ಫಲಿಸದೆ ಆಕೆ 2019ರ ಮಾರ್ಚ್ 11ರಂದು ತೀರಿಕೊಂಡಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಂಜುನಾಥ ಅವರು, ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹಾರೂಗೇರಿಯ ಅಂದಿನ ಸಿಪಿಐ ಎನ್ . ಮಹೇಶ ಪ್ರಕರಣದ ತನಿಖೆ ಕೈಗೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಐ.ಎಂ.ಮಠಪತಿ ವಾದ ಮಂಡಿಸಿದ್ದರು.