ಜನಸಾಗರ ಸೇರಿಸಲು ಎಂಇಎಸ್ ನಾಯಕರು ಹೆಣಗಾಡಿದರು. ಸಮಿತಿ ಕಾರ್ಯಕರ್ತರಿಗಿಂತ ರಜಾದಿನವಾಗಿದ್ದರಿಂದ ಪ್ರವಾಸಿಗರೇ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು.
ಬೆಳಗಾವಿ :ಬೆಳಗಾವಿ ತಾಲೂಕಿನ ರಾಜಹಂಸಗಡದಲ್ಲಿ ರವಿವಾರ ಶಿವಾಜಿ ಪ್ರತಿಮೆ ಶುದ್ದೀಕರಣಕ್ಕೆ ಜನ ಸಾಗರವನ್ನೇ ಸೇರಿಸುವುದಾಗಿ ಹೇಳಿಕೊಂಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಭಾರಿ ಮುಖಭಂಗ ಅನುಭವಿಸಿದೆ.
ಬೆಳಗ್ಗೆ 11:00 ಗೆ ಶಿವಾಜಿ ಪ್ರತಿಮೆಗೆ ಶುದ್ಧೀಕರಣ ನಡೆಸುವುದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಈ ಮೊದಲು ಭರ್ಜರಿ ಪ್ರಚಾರ ನಡೆಸಿತ್ತು. ಆದರೆ ಮಧ್ಯಾಹ್ನ 1:00 ಆದರೂ ಜನರ ಆಗಮನವಾಗಿರಲಿಲ್ಲ. ಇದರಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರು
ಹತಾಶೆಗೊಳಗಾದರು.
ಬೊಮ್ಮಾಯಿಗೆ ಸಡ್ಡು :ಈ ಮೊದಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 2 ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ವಿಧ್ಯುಕ್ತವಾಗಿ ನಾಡಿಗೆ ಅರ್ಪಣೆ ಮಾಡಿದ್ದರು. ಆನಂತರ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ನಾಯಕರನ್ನು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ವಂಶಜರನ್ನು ಕರೆ ತಂದು ಮತ್ತೊಮ್ಮೆ ಶಿವಾಜಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು.
ಇಷ್ಟು ಸಾಲದೆಂಬಂದೆ ಇಂದು ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಧೋರಣೆ ಖಂಡಿಸಿ ಶುದ್ಧೀಕರಣ ಹೆಸರಿನಲ್ಲಿ ಭಾರಿ ಸಂಖ್ಯೆಯಲ್ಲಿ ಮರಾಠಿ ಭಾಷಿಕರನ್ನು ಸೇರಿಸಲು ಮುಂದಾಗಿ ಜನರನ್ನು ಸೇರಿಸುವಲ್ಲಿ ಹೆಣಗಾಟ ನಡೆಸಿದರು. ಬೆಳಗ್ಗೆಯಿಂದ ಹೋಮ-ಹವನ ಮುಂತಾದ ಕಾರ್ಯಕ್ರಮ ನಡೆಸಲಾಯಿತು. ನಂತರ ಕೋಟೆಯ ಕೆಳಭಾಗದಿಂದ ಶಿವಾಜಿ ಮಹಾರಾಜರ ಪ್ರತಿಮೆವರೆಗೆ ಮೆರವಣಿಗೆ ನಡೆಯಿತು. ಸಮಿತಿಯ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಆದರೆ ಇವರಿಗಿಂತ ಭಾನುವಾರ ರಜಾದಿನವಾದ್ದರಿಂದ ಪ್ರವಾಸಿಗರೆ ಹೆಚ್ಚಿನ ಪ್ರಮಾಣದಲ್ಲಿ ಕೋಟೆಗೆ ಬಂದಿದ್ದು ಗಮನಸೆಳೆಯಿತು.