ಮಂಗಳೂರು : ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದ ತೇಜ ಎಂಬುವವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿಯಾಗಿದ್ದಾರೆ. ದುರ್ಗಾ ಅವರು ಎರಡು ಗಂಡು, ಎರಡು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಈ ಶಿಶುಗಳು ಕ್ರಮವಾಗಿ 1.1 ಕೆಜಿ, 1.2 ಕೆಜಿ, 800 ಗ್ರಾಂ, 900 ಗ್ರಾಂ ತೂಕ ಹೊಂದಿದೆ. 30 ವಾರಗಳಿಗೆ ಹೆರಿಗೆಯಾಗಿದೆ. ಹೀಗಾಗಿ ಅವಧಿಗೆ ಮುನ್ನ ಜನನವಾಗಿದ್ದರಿಂದ ಸದ್ಯ ಶಿಶುಗಳನ್ನು ಎನ್ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಒಂದೇ ಹೆರಿಗೆಯಲ್ಲಿ ನಾಲ್ಕು ಶಿಶುಗಳ ಜನನ ಬಹಳ ಅಪರೂಪವಾಗಿದ್ದು, ಇದು 7,00,000 ಗರ್ಭಧಾರಣೆಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಸ್ತ್ರೀರೋಗ ತಜ್ಞೆ, ಡಾ.ಜೋಯ್ಲೀನ್ ಡಿಅಲ್ಮೇಡಾ ಗರ್ಭಿಣಿಯ ಪ್ರಸವಪೂರ್ವ ಆರೈಕೆ ಮಾಡಿದ್ದಾರೆ. ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಿಭಾಗದ ವೈದ್ಯಕೀಯ ತಂಡ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಅಪರೂಪದ ಹೆರಿಗೆ ಪ್ರಕರಣ ಎಂದು ಹೇಳಲಾಗಿದೆ.