ಮುಂಬೈ:
ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ 2019ರ ನಂತರ ನಾಲ್ಕು ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಿಗೆ ಮಹಾರಾಷ್ಟ್ರದ ರಾಜಭವನ ವೇದಿಕೆಯಾದಂತಾಗಿದೆ.
2019ರ ನವೆಂಬರ್ನಲ್ಲಿ ರಾಜಭವನದಲ್ಲಿ ಬೆಳ್ಳಂಬೆಳಗ್ಗೆ ನಡೆದಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿಯಾಗಿ ಎನ್ಸಿಪಿಯ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಆಗ ಅಜಿತ್ ಪವಾರ್ ಅವರು ಎನ್ಸಿಪಿ ವಿಭಜಿಸಲು ವಿಫಲರಾಗಿದ್ದು, ಕೇವಲ 80 ಗಂಟೆ ಕಾಲ ಆ ಸರ್ಕಾರ ಅಸ್ತಿತ್ವದಲ್ಲಿತ್ತು.
ತಿಂಗಳ ತರುವಾಯ ಶಿವಸೇನೆ ನೇತೃತ್ವದಲ್ಲಿ ಶಿವಸೇನೆ–ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿಕೂಟ ‘ಮಹಾವಿಕಾಸ ಆಘಾಡಿ’ ಸರ್ಕಾರ ರಚನೆಯಾಗಿತ್ತು. ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಆದರೆ, ಶಿವಸೇನೆಯ ಏಕನಾಥ್ ಶಿಂದೆ ಅವರು 39 ಶಾಸಕರ ಬೆಂಬಲದೊಂದಿಗೆ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದು, ಸರ್ಕಾರ 2022ರ ಜೂನ್ನಲ್ಲಿ ಪತನವಾಗಿತ್ತು. ನಂತರದ ಬೆಳವಣಿಗೆಯಲ್ಲಿ ಜೂ.30ರಂದು ಶಿಂದೆ ಅವರು ಮುಖ್ಯಮಂತ್ರಿಯಾಗಿ, ಬಿಜೆಪಿಯ ದೇವೇಂದ್ರ ಫಡಣವೀಸ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಈಗ ಅಜಿತ್ ಪವಾರ್ ಮತ್ತೆ ಉಪ ಮುಖ್ಯಮಂತ್ರಿಯಾಗಿದ್ದಾರೆ. 2019ರಲ್ಲಿ ಮೊದಲ ಪ್ರಮಾಣ ವಚನ ನಡೆದಾಗ ಭಗತ್ ಸಿಂಗ್ ಕೋಶಿಯಾರಿ ರಾಜ್ಯಪಾಲರಾಗಿದ್ದರೆ, ಈಗ ಆ ಸ್ಥಾನದಲ್ಲಿ ರಮೇಶ್ ಬೈಸ್ ಇದ್ದಾರೆ.
2024ರಲ್ಲಿ ಲೋಕಸಭೆಯ ಚುನಾವಣೆಯ ಬಳಿಕ ಬಹುತೇಕ ಅಕ್ಟೋಬರ್ ವೇಳೆಗೆ ಮಹಾರಾಷ್ಟ್ರ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ಸಾರ್ವತ್ರಿಕ ಚುನಾವಣೆಯ ಬಳಿಕ 2019ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ ಎನ್ಸಿಬಿ ಇಬ್ಭಾಗ ಮಾಡಲು ಯತ್ನಿಸಿದ್ದ ಅಜಿತ್ ಪವಾರ್, ನಾಲ್ಕು ವರ್ಷಗಳ ತರುವಾಯ ಈಗ ಆ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ 63 ವರ್ಷ ವಯಸ್ಸಿನ ಅಜಿತ್ ಪವಾರ್ ನಾಲ್ಕು ವರ್ಷಗಳಲ್ಲಿ 3ನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಅದಕ್ಕೂ ಹಿಂದೆಯೂ ಅವರು ಎರಡು ಬಾರಿ ಡಿಸಿಎಂ ಆಗಿದ್ದರು.
ಈ ಮೂಲಕ ಹಲವು ತಿಂಗಳಿಂದ ಚರ್ಚೆಗೆ ಗ್ರಾಸವಾಗಿದ್ದ, ತಮ್ಮ ಮುಂದಿನ ರಾಜಕೀಯ ನಡೆ ಕುರಿತ ಚರ್ಚೆಗೆ ಸದ್ಯಕ್ಕೆ ವಿರಾಮ ಹಾಕಿದ್ದಾರೆ. ರಾಜಕೀಯ ಮಹತ್ವಾಕಾಂಕ್ಷಿಯಾದ ಅಜಿತ್ ಪವಾರ್, ನೇರ ಮಾತಿಗೆ ಹೆಸರಾದವರು. ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು, ಕೆಳಹಂತದಲ್ಲಿ ಪ್ರಭಾವಿ ನಾಯಕ ಎಂಬ ವರ್ಚಸ್ಸು ಹೊಂದಿದ್ದಾರೆ. ಪ್ರಬಲ ಆಡಳಿತಗಾರನಾಗಿ ಹೊರಹೊಮ್ಮಿದ್ದಾರೆ.
ಅಜಿತ್ ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಅಣ್ಣ ಅನಂತ್ ಪವಾರ್ ಅವರ ಮಗ. ಇತ್ತೀಚೆಗಷ್ಟೇ ವಿಧಾನಸಭೆ ವಿರೋಧಪಕ್ಷದ ನಾಯಕನ ಸ್ಥಾನದಿಂದ ತಮ್ಮನ್ನು ಮುಕ್ತಿಗೊಳಿಸಬೇಕು ಎಂದು ನಾಯಕರಿಗೆ ಮನವಿ ಮಾಡಿದ್ದರು.
2019ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಬಾರಾಮತಿ ಕ್ಷೇತ್ರದಿಂದ 1.65 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದುಬಂದಿದ್ದರು. ಆಗ ಮೊದಲಿಗೆ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ದರು. ಬೆಳ್ಳಂಬೆಳಿಗ್ಗೆ ನಡೆದಿದ್ದ ದಿಢೀರ್ ಸಮಾರಂಭದಲ್ಲಿ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಆ ಸರ್ಕಾರ 80 ಗಂಟೆಯಷ್ಟೇ ಅಸ್ತಿತ್ವದಲ್ಲಿತ್ತು. ಬಳಿಕ ಶಿವಸೇನೆ ನೇತೃತ್ವದ ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಆಗಿ ಎರಡೂವರೆ ವರ್ಷ ಅಧಿಕಾರದಲ್ಲಿದ್ದರು. ಕಳೆದ ಜೂನ್ ತಿಂಗಳು ಈ ಸರ್ಕಾರ ಪತನಗೊಂಡಿತ್ತು.
ಈ ಮೊದಲೂ ಅಜಿತ್ ಅವರು ಕಾಂಗ್ರೆಸ್ –ಎನ್ಸಿಪಿ ಮೈತ್ರಿಯಾಗಿ ರಚಿಸಿದ್ದ ಸರ್ಕಾರದಲ್ಲಿ, ಅಶೋಕ್ ಚವಾಣ್ ಹಾಗೂ ಪೃಥ್ವಿರಾಜ್ ಚವಾಣ್ ಅವರು ಮುಖ್ಯಮಂತ್ರಿಗಳಾಗಿದ್ದಾಗಲೂ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
1982ರಲ್ಲಿ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರಾಗಿ ಸಾರ್ವಜನಿಕ ಸೇವೆಗೆ ಪ್ರವೇಶಿಸಿದ್ದ ಅಜಿತ್ ಪವಾರ್, 1991ರಲ್ಲಿ ಪುಣೆ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಹಲವು ವರ್ಷ ಆ ಸ್ಥಾನದಲ್ಲಿದ್ದರು.
1991ರಲ್ಲಿ ಬಾರಾಮತಿ ಕ್ಷೇತ್ರದಂದ ಲೋಕಸಭೆಗೂ ಆಯ್ಕೆಯಾಗಿದ್ದರು. ಆದರೆ, ಚಿಕ್ಕಪ್ಪ ಶರದ್ ಪವಾರ್ ಅವರಿಗಾಗಿ ರಾಜೀನಾಮೆ ನೀಡಿದ್ದರು. ಆ ನಂತರ ಬಾರಾಮತಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಅಲ್ಲಿಂದ ಸತತವಾಗಿ ಆಯ್ಕೆಯಾಗುತ್ತಿದ್ದಾರೆ.
1999ರಲ್ಲಿ ಸುಧಾಕರರಾವ್ ನಾಯಕ್ ನೇತೃತ್ವದ ಸರ್ಕಾರಲ್ಲಿ ಮೊದಲಿಗೆ ಕೃಷಿ ಮತ್ತು ಇಂಧನ ಖಾತೆ ರಾಜ್ಯ ಸಚಿವರಾಗಿ ಸಂಪುಟ ಸೇರಿದ್ದರು.
ಅಜಿತ್ ಪವಾರ್ ಅವರ ಆಪ್ತರು ಮತ್ತು ಕುಟುಂಬದ ಸದಸ್ಯರ ಮೇಲೆ ಸಕ್ಕರೆ ಸಹಕಾರ ಘಟಕಗಳಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಭ್ರಷ್ಟಾಚಾರ ವಿರೋಧಿ ಘಟಕ (ಎಸಿಬಿ) ತನಿಖೆ ನಡೆಸುತ್ತಿದೆ.
2014ರಲ್ಲಿ ವಿರೋಧ ಪಕ್ಷದಲ್ಲಿದ್ದ ದೇವೇಂದ್ರ ಫಡಣವೀಸ್ ಅವರೇ, ಅಜಿತ್ ಪವಾರ್ ಅವರ ಪಾತ್ರವಿದೆ ಎನ್ನಲಾದ ₹ 70,000 ಕೋಟಿ ಮೊತ್ತದ ನೀರಾವರಿ ಹಗರಣ ಕುರಿತು ಗಮನಸೆಳೆದಿದ್ದರು.
ಈ ವರ್ಷದ ಮೇ ತಿಂಗಳಲ್ಲಿ ಶರದ್ ಪವಾರ್ ಅವರು ಎನ್ಸಿಪಿ ಮುಖ್ಯಸ್ಥನ ಸ್ಥಾನದಿದ ಕೆಳಗಿಳಿಯುವ ಇಂಗಿತ ವ್ಯಕ್ತಪಡಿಸಿದ್ದು, ಬಳಿಕ ನಿರ್ಧಾರದಿಂದ ಹಿಂದೆ ಸರಿದಿದ್ದರು. ಅದರ ಹಿಂದೆಯೇ ಅಜಿತ್ ಪವಾರ್ ಅವರು ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು.
ಒಂದು ಮೂಲಕ ಪ್ರಕಾರ, ಇತ್ತೀಚೆಗೆ ಶರದ್ ಪವಾರ್ ಅವರು ಪುತ್ರಿ ಸುಪ್ರಿಯಾ ಸುಳೆ ಅವರನ್ನು ಎನ್ಸಿಪಿ ಕಾರ್ಯಾಧ್ಯಕ್ಷರಾಗಿ ನೇಮಿಸಿದ ಬಳಿಕ, ಬಿಜೆಪಿ–ಶಿವಸೇನೆ (ಶಿಂದೆ ಬಣ) ಮೈತ್ರಿ ಸರ್ಕಾರ ಸೇರುವ ಯತ್ನವನ್ನು ಅಜಿತ್ ಪವಾರ್ ಚುರುಕುಗೊಳಿಸಿದರು.
ಅಜಿತ್ ಪವಾರ್ ಅವರೊಂದಿಗೆ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಸೇರಿದ ಎಂಟು ಶಾಸಕರಲ್ಲಿ ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಛಗನ್ ಭುಜ್ಬಲ್ ಕೂಡಾ ಸೇರಿದ್ದಾರೆ. ಇವರು ಶರದ್ ಪವಾರ್ ಅವರ ಕಟ್ಟಾ ಬೆಂಬಲಿಗರು ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಈ ಇಬ್ಬರ ಬಂಡಾಯವು ಎನ್ಸಿಪಿ ಮತ್ತು ನಾಯಕರಿಗೆ ಇನ್ನಿಲ್ಲದ ಆಘಾತ ನೀಡಿದೆ.
ಈ ಪೈಕಿ ಭುಜ್ಬಲ್ ಅವರು ಮಾಲಿ ಸಮುದಾಯದವರು. ಹಿಂದೆ ಶಿವಸೇನೆಯಲ್ಲಿದ್ದು ತಮ್ಮ ನೇರ, ನಿಷ್ಟುರ ಮಾತುಗಳಿಗೆ ಹೆಸರಾಗಿದ್ದರು. 1991ರಲ್ಲಿ ಶಿವಸೇನೆ ತೊರೆದು ಕಾಂಗ್ರೆಸ್ ಸೇರಿದ್ದರು. ಶರದ್ ಪವಾರ್ ಅವರು ಕಾಂಗ್ರೆಸ್ನಿಂದ ಬೇರ್ಪಟ್ಟು ಎನ್ಸಿಪಿ ರಚಿಸಿದಾಗ, ಭುಜ್ಬಲ್ ಎನ್ಸಿಪಿ ಸೇರಿದ್ದರು. ಆಗ ಮಹಾರಾಷ್ಟ್ರ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದರು.
ವಿಧಾನಸಭೆಯಲ್ಲಿ ನಾಸಿಕ್ನ ಯೆಒಲಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಭುಜ್ಬಲ್, ಈ ಮೊದಲು ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 1999ರಲ್ಲಿ ಎನ್ಸಿಪಿಯ ರಾಜ್ಯ ಘಟಕದ ಅಧ್ಯಕ್ಷರು ಆಗಿದ್ದರು.
ಬಹುಕೋಟಿಯ ತೆಲಗಿಯ ನಕಲಿ ಛಾಪಾಕಾಗದ ಹಗರಣದ ಸಂಬಂಧ ಭುಜ್ಬಲ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಪಿಎಂಎಲ್ಎ ಪ್ರಕರಣದಲ್ಲಿ ಎರಡು ವರ್ಷ ಜೈಲುವಾಸ ಅನುಭವಿಸಿದ್ದು, 2018ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ದಿಲೀಪ್ ವಾಲ್ಸೆ ಪಾಟೀಲ್: ಇವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಆಪ್ತ ಸಹಾಯಕನಾಗಿ ರಾಜಕೀಯ ಬದುಕು ಆರಂಭಿಸಿದ್ದು, ಶರದ್ ಪವಾರ್ ಅವರ ಅತ್ಯಂತ ನಿಕಟವರ್ತಿ ಎಂದೇ ಗುರುತಿಸಿಕೊಂಡಿದ್ದರು. ಈ ಹಿಂದೆ ಸ್ಪೀಕರ್ ಆಗಿ, ಅಬಕಾರಿ ಮತ್ತು ಗೃಹ ಸಚಿವರಾಗಿದ್ದರು. ಅಂಬೆಗಾಂವ್ ಕ್ಷೇತ್ರದಿಂದ ಸತತ ಏಳನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಹಸನ್ ಮುಷ್ರೀಫ್ ಅವರು: ಕೊಲ್ಹಾಪುರ ಜಿಲ್ಲೆಯ ಕಾಗಲ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಇವರ ವಿರುದ್ಧ ಇ.ಡಿ ತನಿಖೆ ನಡೆದಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಇವರಿಗೆ ಸೇರಿದ ತಾಣಗಳಲ್ಲಿ ಈ ಮೊದಲು ಇಡಿ ತಪಾಸಣೆ ನಡೆಸಿತ್ತು.
ಧನಂಜಯ್ ಮುಂಡೆ: ಬೀಡ್ ಜಿಲ್ಲೆಯ ಪಾರ್ಲಿ ಕ್ಷೇತ್ರ ಪ್ರತಿನಿಧಿಸುವ ಇವರು ಬಿಜೆಪಿ ಧುರೀಣ ಗೋಪಿನಾಥ ಮುಂಡೆ ಅವರ ಸಂಬಂಧಿ. ಅನಿಲ್ ಪಾಟೀಲ್ ಅವರು ಎನ್ಸಿಪಿಯ ಮುಖ್ಯ ಸಚೇತಕ ಆಗಿದ್ದವರು.
ಅದಿತಿ ತತ್ಕರೆ ಅವರು ರಾಯಘಡ ಜಿಲ್ಲೆಯ ಶ್ರೀವರ್ಧನ್ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಎನ್ಸಿಪಿ ಸಂಸದ ಸುನಿಲ್ ತತ್ಕರೆ ಅವರ ಪುತ್ರಿ. ಅಜಿತ್ ಪವಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಎಂವಿಎ ಸರ್ಕಾರದಲ್ಲಿಯೂ ಇವರು ಸಚಿವರಾಗಿದ್ದರು.
ಈಗ ಏಕನಾಥ್ ಶಿಂದೆ ಸರ್ಕಾರದಲ್ಲಿ ಮೊದಲ ಮಹಿಳಾ ಸಚಿವೆಯಾಗಿ ಸಂಪುಟ ಸೇರಿದ್ದಾರೆ.
ಫಡ್ನವಿಸ್ ತಂತ್ರಗಾರಿಕೆ :
ದೇವೇಂದ್ರ ಫಡಣವೀಸ್: ಮಹಾರಾಷ್ಟ್ರ ರಾಜಕೀಯ ಮೇಲಾಟದ ಚಾಣಕ್ಯ
ಅಜಿತ್ ಪವಾರ್ ಅವರು, ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರದ ತೆಕ್ಕೆಗೆ ಸೇರಿರುವ ಹಿಂದೆ ಫಡಣವೀಸ್ ಅವರ ಚಾಣಾಕ್ಷತನವೂ ಕೆಲಸ ಮಾಡಿದೆ.
2019ರ ಮಹಾರಾಷ್ಟ್ರ ವಿಧಾನಸಭೆಯ ಚುನಾವಣಾ ಸಮಯ. ‘ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರುವೆ’ ಎಂದು ದೇವೇಂದ್ರ ಫಡಣವೀಸ್ ಘೋಷಿಸಿದ್ದರು.
ಚುನಾವಣಾ ಪ್ರಚಾರದ ವೇಳೆ ಅವರ ಈ ಮಾತು ಹೆಚ್ಚು ಪ್ರಚಲಿತವಾಗಿತ್ತು. ಆದರೆ, ಶಿವಸೇನೆ ಇದನ್ನು ಅಪಹಾಸ್ಯ ಮಾಡಿತ್ತು. ಮತ್ತೆ ಸಿ.ಎಂ ಹುದ್ದೆಗೇರುವುದು ಕನಸಿನ ಮಾತು ಎಂದು ಜರೆದಿತ್ತು. ಎನ್ಸಿಪಿ ಮತ್ತು ಕಾಂಗ್ರೆಸ್ ಕೂಡ ಗೇಲಿ ಮಾಡಿದ್ದು ಉಂಟು.
ಫಡಣವೀಸ್ ಮಾತಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್, ಜೋಕುಗಳು ಹುಟ್ಟಿಕೊಂಡಿದ್ದವು. ಚುನಾವಣೆ ಮುಗಿದ ಬಳಿಕ ಎನ್ಸಿಪಿ ನಾಯಕ ಅಜಿತ್ ಪವಾರ್ ಜೊತೆಗೆ ಸರ್ಕಾರ ರಚಿಸಿ ಮುಖ್ಯಮಂತ್ರಿ ಹುದ್ದೆಗೇರಿದರು. ಸರ್ಕಾರದ ಭಾಗವಾದ ಅಜಿತ್ ಡಿಸಿಎಂ ಪಟ್ಟಕ್ಕೇರಿದರು. ಆದರೆ, ಫಡಣವೀಸ್ ಸರ್ಕಾರ 80 ಗಂಟೆ ಕಾಲವಷ್ಟೇ ಹೋರಾಡಿ ತನ್ನ ಉಸಿರಾಟ ನಿಲ್ಲಿಸಿತ್ತು.
ಕಾಂಗ್ರೆಸ್ನ ಸಹಕಾರದಲ್ಲಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ‘ಮಹಾ ವಿಕಾಸ ಆಘಾಡಿ’ ಹೆಸರಿನಡಿ ಸರ್ಕಾರ ರಚಿಸಿ ಮುಖ್ಯಮಂತ್ರಿ ಹುದ್ದೆಯನ್ನು ಕಿತ್ತುಕೊಂಡಾಗ ಫಡಣವೀಸ್ ಅಕ್ಷರಶಃ ಅಸಹಾಯಕರಾಗಿದ್ದರು.
2022ರ ಮೇ 1ರಂದು ಬ್ಯಾಂಕ್ ಉದ್ಯೋಗಿಯಾದ ತನ್ನ ಪತ್ನಿ ಅಮೃತಾ ಅವರ ಜೊತೆಗೆ ಟಿ.ವಿ ಶೋವೊಂದರಲ್ಲಿ ಫಡಣವೀಸ್ ಕಾಣಿಸಿಕೊಂಡಾಗ ‘ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರುವೆ’ ಎಂದು ಗುಡುಗಿದ್ದರು.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ ಈಗ ಉಪ ಮುಖ್ಯಮಂತ್ರಿಯಾಗಿ ಫಡಣವೀಸ್ ಮತ್ತೆ ಮರಳಿದ್ದಾರೆ. ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು, ಮುಖ್ಯಮಂತ್ರಿ ಏಕನಾಥ ಶಿಂದೆ ಸರ್ಕಾರದ ತೆಕ್ಕೆಗೆ ಸೇರಿರುವ ಹಿಂದೆ ಫಡಣವೀಸ್ ಅವರ ಚಾಣಾಕ್ಷತನವೂ ಕೆಲಸ ಮಾಡಿದೆ ಎಂಬುದು ರಾಜಕೀಯ ವಲಯದಲ್ಲಿನ ಸದ್ಯದ ಬಹುಚರ್ಚಿತ ವಿಷಯ. ಈ ರಾಜಕೀಯ ಚದುರಂಗ ಮೇಲಾಟದ ಹಿಂದಿರುವ ‘ಚಾಣಕ್ಯ’ ಅವರೇ ಎನ್ನುವುದು ಸರ್ವವಿದಿತ.
ರಾಜಕೀಯವಾಗಿ ‘ಕ್ಲೀನ್ ಇಮೇಜ್’ ವ್ಯಕ್ತಿತ್ವ ಹೊಂದಿರುವ ಅವರು ಮಹಾರಾಷ್ಟ್ರದ ಘಟನಾನುಘಟಿ ರಾಜಕಾರಣಿಗಳ ನಡುವೆ ‘ಸಾಮಾನ್ಯ ವ್ಯಕ್ತಿ’ಯಾಗಿಯೇ ಗುರುತಿಸಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.
ಮೃದುಭಾಷಿಯಾದ ಅವರು ಆರೆಸ್ಸೆಸ್ ಗರಡಿಯಲ್ಲಿ ಪಳಗಿದ್ದಾರೆ. ನಾಗಪುರ ಮೂಲದ ಅವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.