ಕೊಪ್ಪಳ :ಗ್ರಾಮ ಪಂಚಾಯತ್ ಕಾರ್ಯಾಲಯದ ಕಂಪ್ಯೂಟರ್ ಆಪರೇಟರ್ ವಿಠ್ಠಲ್ ತಂದೆ ವೀರಣ್ಣಶೆಟ್ಟಿ ಅವರು ಲಂಚದ ಹಣ 15,000 ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮನೆ ಸ್ವತ್ತಿಗೆ ನಮೂನೆ 9 ನೀಡಲು ಕುಕನೂರು ತಾಲೂಕಿನ ನೆಲಜೇರಿ ಗ್ರಾಪಂ ಪಿಡಿಓ ಆನಂದ ಎಲಿಗಾರ ಅವರ ಸೂಚನೆಯಂತೆ ಕಂಪ್ಯೂಟರ್ ಆಪರೇಟರ್ ವಿಠ್ಠಲ್ ತಂದೆ ವೀರಣ್ಣಶೆಟ್ಟಿ ಅವರು 20 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಚೌಕಾಸಿ ನಂತರ 15 ಸಾವಿರ ಲಂಚದ ಹಣಕ್ಕೆ ಒಪ್ಪಿಕೊಂಡು ಕುದರಿಮೋತಿ ಗ್ರಾಪಂ ಕಾರ್ಯಾಲಯದಲ್ಲಿ ದೂರುದಾರರಿಂದ ಲಂಚದ ಹಣ ಪಡೆದುಕೊಂಡು ಟ್ರಾಪ್ಗೆ ಒಳಗಾಗಿದ್ದಾರೆ.
ರಾಯಚೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಪ್ರಕರಣವನ್ನು ಭೇದಿಸಿರುತ್ತಾರೆ. ಈ ಬಗ್ಗೆ ಕೊಪ್ಪಳ ಲೋಕಾಯುಕ್ತ ಠಾಣೆಯಲ್ಲಿ ಗುನ್ನೆ ನಂ. 04/2023 ರಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.