ಉಡುಪಿ:
ಮುಂದಿನ ಜನ್ಮ ಇದ್ದರೆ ಪಾಣಾರ ಸಮಾಜದಲ್ಲಿ ಹುಟ್ಟಿ ದೈವದ ಚಾಕರಿ ಮಾಡುವ ಅವಕಾಶ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೆಸರಾಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಪಾಣ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಸಹಕಾರದೊಂದಿಗೆ ರಾಜಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಪಾಣಾರ ಸಂಘದ ವಾರ್ಷಿಕೋತ್ಸವ, ಸಮಾವೇಶ ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಂತಾರ ಸಿನಿಮಾ ಚಿತ್ರೀಕರಣ ಸಂದರ್ಭ ದೈವ ನರ್ತಕ್ಕೆ ಅಪಮಾನವಾಗದಂತೆ ಪಾಣಾರ ಸಮುದಾಯದ ದೈವ ನರ್ತಕರು ತಿಳಿ ಹೇಳಿದ್ದಾರೆ. ಪ್ರತಿ ಹಂತದಲ್ಲೂ ತಿದ್ದಿದ್ದಾರೆ. ಕಾಂತಾರ ಸಿನಿಮಾ ಮೂಲಕ ದೈವಗಳ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನಿಮ್ಮ ಸಮುದಾಯದವನೇ ಎಂಬ ಭಾವ ಮೂಡಿದೆ ಎಂದು ಹೇಳಿದರು.
ದೈವ ನಂಬಿದವರನ್ನು ಕೈಬಿಡುವುದಿಲ್ಲ ಎಂಬುದಕ್ಕೆ ನಾನೇ ಉದಾಹರಣೆ. ಕಾಂತಾರ ಸಿನಿಮಾ ಗೆಲುವಿನಲ್ಲಿ ದೈವಗಳ ಪ್ರೇರಣೆ ಇದ್ದು, ಪಂಜುರ್ಲಿ, ಗುಳಿಗ, ಅಣ್ಣಪ್ಪ ಸ್ವಾಮಿ ದೈವಗಳ ಆಶೀರ್ವಾದ ಇದೆ.
ಕರಾವಳಿಯಲ್ಲಿ ದೇವಸ್ಥಾನಗಳು ನಿರ್ಮಾಣವಾಗುವ ಮೊದಲು ದೈವಾರಾಧನೆ ಅಸ್ತಿತ್ವದಲ್ಲಿತ್ತು. ಪ್ರಕೃತಿಯನ್ನು ಪೂಜಿಸಲಾಗುತ್ತಿತ್ತು. ಪಾಣಾರ ಸಮುದಾಯ ದೈವ ನರ್ತಕರಾಗಿ, ದೈವ ಸೇವೆಯಲ್ಲಿ ನಿರತರಾಗಿರುವುದು ಹೆಮ್ಮೆಯ ವಿಚಾರ. ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ; ಪಾಣಾರ ಸಮುದಾಯಕ್ಕೆ ದೈವ ನರ್ತನ ಕಲೆ ಸಿದ್ಧಿಸಿದೆ ಎಂದರು.
ಸಮಾಜಮುಖಿ ಕಾರ್ಯಗಳಿಗೆ ಟ್ರಸ್ಟ್ ನಿರ್ಮಾಣ ಮಾಡಲಾಗುತ್ತಿದ್ದು ದೈವ ನರ್ತಕರ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡಲಾಗುವುದು. ಪಾಣಾರ ಸಮುದಾಯ ಮಕ್ಕಳಿಗೆ ಶಿಕ್ಷಣ ನೀಡಲು ಒತ್ತು ನೀಡಬೇಕು. ದೈವಾರಾಧನೆ ಸೇರಿದಂತೆ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಆಗ ಮಾತ್ರ ಸುಂದರ ಸಮಾಜ ಕಟ್ಟಲು ಸಾಧ್ಯ ಎಂದರು.
ಪಾಣರ ಸಮುದಾಯಕ್ಕೆ ಸಮದಾಯ ಭವನ ಇಲ್ಲ ಎಂಬುದು ಬೇಸರದ ವಿಚಾರ. ಸಮುದಾಯ ಭವನ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ರಿಷಬ್ ಶೆಟ್ಟಿ ಭರವಸೆ ನೀಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಣಾರ ಎಂಬ ಸಮಾಜ ನೆಲೆಸಿದ್ದು ಪುರಾತನ ಕಾಲದಿಂದಲೂ ದೈವಗಳ ವೇಷ ಧರಿಸುವ ಸಂಪ್ರದಾಯ ಅನುಸರಿಸುತ್ತಾ ಬಂದಿದೆ.