ಪುಣೆ :
ಬೆಳಗಾವಿಯಲ್ಲಿ ಜನಿಸಿದ್ದ ಖ್ಯಾತ ನಟ ಶವವಾಗಿ ಪತ್ತೆಯಾಗಿದ್ದು, ಅವರ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ.
ರವೀಂದ್ರ ಮಹಾಜನಿ ಅವರು ಮೃತಪಟ್ಟ ಖ್ಯಾತ ನಟ. ಅವರು 1949 ರಲ್ಲಿ ಬೆಳಗಾವಿಯಲ್ಲಿ ಜನಿಸಿದ್ದರು. ಅವರ ತಂದೆ ಹೆಚ್.ಆರ್ ಮಹಾಜನಿ ಪ್ರಸಿದ್ಧ ಪತ್ರಕರ್ತರಾಗಿದ್ದರು. 60 ರ ದಶಕದಲ್ಲಿ ಈ ಕುಟುಂಬ ಬೆಳಗಾವಿಯಿಂದ ಮುಂಬೈಗೆ ವಲಸೆ ಹೋಗಿತ್ತು.
ಮರಾಠಿ ಸಿನಿಮಾರಂಗದಲ್ಲಿ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿರುವ ಗಶ್ಮೀರ್ ಮಹಾಜನಿ, ರವೀಂದ್ರ ಮಹಾಜನಿ ಅವರ ಪುತ್ರರಾಗಿದ್ದಾರೆ.
70 ಹಾಗೂ 80ರ ದಶಕದಲ್ಲಿ ರವೀಂದ್ರ ಮಹಾಜನಿ ಅವರು ಹಲವಾರು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದರು. ಇವುಗಳಲ್ಲಿ ಮುಂಬೈ ಚಾ ಫೌಜ್ದಾರ್, ಜುಂಜ್ ಮತ್ತು ಕಲತ್ ನಕಲತ್ ಸಿನಿಮಾಗಳು ಖ್ಯಾತಿ ಪಡೆದಿದ್ದವು
ತಮ್ಮ ಬಾಡಿಗೆ ಫ್ಲಾಟ್ನಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ. ಅವರು ಮೂರು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರವೀಂದ್ರ ಮಹಾಜನಿ ಅವರು ತಮ್ಮ ಫ್ಲಾಟ್ನಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು. ಈ ಫ್ಲಾಟ್ನಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಬಾಗಿಲು ಒಡೆದು ನೋಡಿದಾಗ ರವೀಂದ್ರ ಮಹಾಜನಿ ಮೃತಪಟ್ಟಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ನಟನ ಮಗ ಹಲವು ದಿನಗಳಿಂದ ತಂದೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಅವರ ಕಾಲ್ಗೆ ಉತ್ತರ ಬಂದಿರಲಿಲ್ಲ. ನಟನ ಮೃತದೇಹ ಸಿಗುವ ಕೆಲವು ಗಂಟೆಗಳ ಮೊದಲು ಅವರ ಮಗ ತನ್ನ ಸ್ನೇಹಿತನ ಬಳಿ ತಂದೆಯ ಫ್ಲ್ಯಾಟ್ಗೆ ಹೋಗಿ ನೋಡುವಂತೆ ಹೇಳಿದ್ದರು. ಶನಿವಾರ ತಂದೆಯ ಫ್ಲ್ಯಾಟ್ಗೆ ಹೋಗಲು ನನ್ನ ಗೆಳೆಯ ತೀರ್ಮಾನಿಸಿದ್ದ ಎಂದು ನಟನ ಪುತ್ರ ತಿಳಿಸಿದ್ದಾರೆ.