ಬೆಳಗಾವಿ: ನಾವು ಮುಂಬೈ ಕ್ರೈಂ ಬ್ರಾಂಚ್ , ಗುಪ್ತಚರ ಇಲಾಖೆಯಿಂದ ನಿಮಗೆ ಕರೆ ಮಾಡುತ್ತಿದ್ದೇವೆ ಎಂದು ವಿಡಿಯೋ ಕಾಲ್ ಮೂಲಕ ಮಹಿಳೆಯರ ನಗ್ನ ದೇಹವನ್ನು ರೆಕಾರ್ಡ್ ಮಾಡಿಕೊಂಡು ಹಣಕ್ಕೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಳಗಾವಿ ಸೈಬರ್ ಎಕನಾಮಿಕ್ಸ್ ಮತ್ತು ನಾಕೋಟಿಕ್ಸ್ (ಸಿಇಎನ್ )ಠಾಣೆಯಲ್ಲಿ ದಾಖಲಾಗಿದೆ.
ಈ ಬಗ್ಗೆ ಬೆಳಗಾವಿಯಲ್ಲಿ ಒಟ್ಟು ಮೂರು ಪ್ರಕರಣ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ತಿಳಿಸಿದ್ದಾರೆ.
ಇದೊಂದು ಹೊಸ ಮಾದರಿಯ ಅಪರಾಧ. ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುವ ತಂತ್ರ. ಮೆಸೇಜ್, ಕರೆ, ವಾಟ್ಸಾಪ್ ಮೂಲಕ ಸಂದೇಶ ಬರುತ್ತದೆ. ಮುಂಬೈ ಕ್ರೈಂ ಬ್ರಾಂಚ್ ದಿಂದ ಕರೆ ಮಾಡಲಾಗುತ್ತಿದೆ ಎಂದು ಆ ಕಡೆಯಿಂದ ಮಾತನಾಡುತ್ತಾರೆ. ಒಂದು ಅಪರಾಧ ಪ್ರಕರಣದಲ್ಲಿ ನಿಮ್ಮ ಹೆಸರು ಇದೆ ಎಂದು ಬೆದರಿಸಲಾಗುತ್ತದೆ. ನೀವು ನಮ್ಮ ಹತ್ತಿರ ಬಂದು ಯಾಕೆ ಈ ರೀತಿ ಮಾಡಿದ್ದೀರಿ ಅಂತ ವಿವರಣೆ ಕೊಡಬೇಕು ಎಂದು ಹೆದರಿಸುತ್ತಾರೆ. ನಾವೀಗ ನಿಮ್ಮ ವಿಚಾರಣೆ ನಡೆಸಬೇಕು, ಕ್ಯಾಮರಾ ಎದುರು ಬನ್ನಿ. ಒಂದು ವೇಳೆ ಈ ವಿಷಯ ಹೊರಗೆ ಬಂದರೆ ನಿಮ್ಮ ಅಪರಾಧದ ಬಗ್ಗೆ ನಿಮ್ಮ ಕುಟುಂಬದವರಿಗೆ ಹೇಳುತ್ತೇವೆ. ಹೇಗೆ ಅಪರಾಧ ಎಸಗಿದ್ದೀರಿ ಎನ್ನುವುದನ್ನು ಬಗ್ಗೆ ನಿಮ್ಮ ದೇಹವನ್ನು ಪರಿಶೀಲಿಸಬೇಕು. ಹೀಗಾಗಿ ಬಟ್ಟೆ ಬಿಚ್ಚಿ ಎಂದು ಹೇಳುತ್ತಾರೆ. ನಂತರ ಮಹಿಳೆಯರು ನ*******ವಾಗಿ ಕ್ಯಾಮರಾ ಎದುರು ಬಂದಾಗ ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ನಂತರ ಇದರ ವಿಡಿಯೋ ಇಟ್ಟುಕೊಂಡು ಹಣದ ಸಂಬಂಧ ಬ್ಲಾಕ್ ಮೇಲ್ ಮಾಡುತ್ತಾರೆ. ಈ ಮಾದರಿಯಲ್ಲಿ ಸುಳ್ಳು ಹೇಳಿ ಮಹಿಳೆಯರನ್ನು ನಂಬಿಸಿ ಹಣದೋಚುವ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.