ಬೆಂಗಳೂರು ಜಿಗಣಿಯಲ್ಲಿ ಭೀಷ್ಮನನ್ನು ಸಾಕಿದ ಶ್ರೇಯಾಂಸ ಜೈನ್ ಮೂಲತಃ ಉಜಿರೆಯ ಎಸ್ ಡಿಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ. ಸದ್ಯ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅವರು 36 ದಿನಗಳ ಕಾಲ ಪಾದಯಾತ್ರೆ ಮೂಲಕ ಧರ್ಮಸ್ಥಳ ತಲುಪಿದ ಪರಿಯನ್ನು ಪವಾಡ ಎಂದೇ ಬಣ್ಣಿಸಿದ್ದಾರೆ. ಭೀಷ್ಮನನ್ನು ಸಾಕಿದ ಈ 2 ವರ್ಷದ ಅವಧಿಯಲ್ಲಿ ತನಗೆ ಯಾವುದೇ ಅಡ್ಡಿ-ಆತಂಕ, ತೊಂದರೆ ಆಗಿಲ್ಲ ಎಂದು ಮನಸಾರೆ ಕೊಂಡಾಡಿದ್ದಾರೆ.
ಧರ್ಮಸ್ಥಳ :
ವಿದ್ಯಾವಂತ ಗೋ ಪ್ರೇಮಿಯೊಬ್ಬರು ಮಾಡಿರುವ ಕೆಲಸ ಇದೀಗ ಅಪಾರ ಜನರ ಗಮನ ಸೆಳೆದಿದೆ. ಗೋವಿನ ಮೇಲಿದ್ದ ಅನುಪಮ ಪ್ರೇಮ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ.
ತನ್ನ ಮನೆಯಲ್ಲಿದ್ದ ಮೊದಲ ಗೀರ್ ತಳಿಯ ಕರುವನ್ನು ಧರ್ಮಸ್ಥಳಕ್ಕೆ ಕೊಡುವೆನೆಂಬ ಪ್ರಾರ್ಥನೆಯನ್ನು 2 ವರ್ಷಗಳ ಕೈಗೊಂಡಿದ್ದ ನಂತರ ಇದೀಗ 360 ಕಿಲೋಮೀಟರ್ ಗೀರ್ ತಳಿಯ ಎತ್ತಿನ ಜತೆ ನಡೆದುಕೊಂಡ ಬಂದ ಭಕ್ತರೊಬ್ಬರ ಕಾರ್ಯ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಕಳಸದ ಹಿರೇಬೈಲು ಶ್ರೇಯಾಂಸ ಜೈನ್ ಅವರು ಗೀರ್ ತಳಿಯ ಎತ್ತಿಗೆ (ಭೀಷ್ಮ)ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ತಿನ್ನಲು ಆಹಾರ ಫಲ ಅರ್ಪಿಸಿ ಶ್ರೇಯಾಂಸ ಜೈನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.
ಧರ್ಮಸ್ಥಳದಲ್ಲಿ ಭೀಷ್ಮ ತುಂಬಾ ಚೆನ್ನಾಗಿರುತ್ತಾನೆ. ಆ ಬಗ್ಗೆ ಯಾವುದೇ ಭಯವಿಲ್ಲ. ನಾನು ಸಾಕಿದ್ದಕ್ಕಿಂತ ಮೂರು ಪಟ್ಟು ಉತ್ತಮವಾಗಿ ಅಲ್ಲಿ ಸಾಕುತ್ತಾರೆ. ಆದರೆ ನನಗೆ ಒಡನಾಟ ಮಿಸ್ ಆಗುತ್ತದೆ ಎಂಬ ಬೇಸರ ಎನ್ನುತ್ತಾರೆ ಶ್ರೇಯಾಂಸ.
ಕಳಸದ ಶ್ರೇಯಾಂಸ ಬೆಂಗಳೂರು ಖಾಸಗಿ ಕಂಪನಿ ಉದ್ಯೋಗಿ. ಕೊರೊನಾದಿಂದ ಮನೆಯಲ್ಲೇ ಕೆಲಸ ಮಾಡುವ ಹೋಮ್ ವರ್ಕ್ ಫ್ರಮ್ ಹೋಮ್ ಪದ್ಧತಿ ಜಾರಿಯಾಗಿದೆ. ಬೆಂಗಳೂರಿನ ತನ್ನ ಬಾಡಿಗೆ ಮನೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ದನ ಸಾಕಲು ಯೋಚಿಸಿ ತನ್ನ ಮನೆಯ ಮೊದಲ ಕರುವನ್ನು ಸಾಕಬೇಕು ಎಂಬ ಕನಸು ಕಂಡರು. ಮೊದಲ ಗಂಡು ಕರುವನ್ನು ಕ್ಷೇತ್ರಕ್ಕೆ ತಲುಪಿಸುವ ಯೋಜನೆ ರೂಪಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಎತ್ತಿಗೆ 1 ವರ್ಷ 9 ತಿಂಗಳು ಆಯಿತು. ಕೊನೆಗೂ ಧರ್ಮಸ್ಥಳ ಕ್ಷೇತ್ರಕ್ಕೆ ನಡೆದುಕೊಂಡು ಬಂದು ಅರ್ಪಿಸುವ ಚಿಂತನೆ ಮಾಡಿದರು. ಎತ್ತನ್ನೇ ದೇವರೆಂದು ನಂಬಿರುವ ಶ್ರೇಯಂಸ್ ಅದನ್ನು ಬೆಂಗಳೂರಿನಿಂದ ಹಳ್ಳಿಯ ರಸ್ತೆಯಲ್ಲಿ ನಡೆದು ಸಾಗಿದರೆ ಹುಲ್ಲು ಸಿಗುತ್ತದೆ, ಇದರಿಂದ ಆಹಾರದ ವ್ಯವಸ್ಥೆ ಆಗುತ್ತದೆ ಎಂದು ಯೋಜನೆ ರೂಪಿಸಿ ಅವರು ರಾಜ್ಯ ಹೆದ್ದಾರಿಗಳ ಮೂಲಕ ಹಾಯ್ದು ಬಂದಿದ್ದಾರೆ.
ಸುದೀರ್ಘ ಸತತ 36 ದಿನಗಳ ಕಾಲ ಕ್ರಮಿಸಿ ಧರ್ಮಸ್ಥಳ ತಲುಪಿದರು. ಆದರೆ ಅವರು 1 ದಿನವೂ ಕಚೇರಿಗೆ ರಜೆ ಹಾಕಿಲ್ಲ. ಬೆಳಿಗ್ಗೆ ಹೊತ್ತು ನಡೆದು ವರ್ಕ್ ಫ್ರಂ ಹೋಮ್ ಕೆಲಸ ನಿರ್ವಹಿಸುತ್ತಿದ್ದಾರೆ. 360 ಕಿಲೋಮೀಟರು ಅವರಿಗೆ ಖರ್ಚಾಗಿರುವುದು ಕೇವಲ 1000 ರೂ. ಮಾತ್ರ. ದಾರಿ ಮಧ್ಯೆ ಜನರು ಶ್ರೇಯಂಸ್ ಅವರಿಗೆ ಪ್ರೀತಿಯಿಂದ ಊಟ ತಿಂಡಿ ಕೊಟ್ಟಿದ್ದಾರೆ. ಕೆಲವರು ಅವರ ಊಟದ ಬಿಲ್ಲು ಸಹ ತೆಗೆದುಕೊಳ್ಳುತ್ತಿರಲಿಲ್ಲ. ಶ್ರೇಯಾಂಸ ಅವರಿಗೆ ಬಾಲ್ಯದಿಂದಲೂ ಜಾನುವಾರುಗಳೆಂದರೆ ಇಷ್ಟ. ಸಿದ್ಧವನ ಗುರುಕುಲದಲ್ಲಿದ್ದಾಗಲೇ ಸ್ಫೂರ್ತಿ ಸಿಕ್ಕಿದೆ. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಸಿದ್ಧವನದಲ್ಲಿ ಹೈನುಗಾರಿಕೆಯಲ್ಲಿ ತೊಡಗಿ ದ್ದರು.