ಶಾಂಘೈ (ಚೀನಾ): ಚೀನಾದ ಮಾನವ ರೂಪದ (Humanoid) ರೋಬೋಟ್, ಮೂರು ದಿನಗಳಲ್ಲಿ 100 ಕಿಲೋಮೀಟರ್ಗೂ ಹೆಚ್ಚು ದೂರವನ್ನು ಕ್ರಮಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records – GWR) ಸ್ಥಾಪಿಸಿದೆ. ಮಾನವರೂಪಿ ಯಂತ್ರವೊಂದು ಅತ್ಯಂತ ದೂರ ನಡೆದ ದಾಖಲೆ ಇದಾಗಿದೆ.
ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, 169 ಸೆಂಟಿಮೀಟರ್ ಎತ್ತರದ ಅಗಿಬಾಟ್ A2 (Agibot A2) ಎಂಬ ಮಾನವರೂಪಿ ರೋಬೋಟ್ ತನ್ನ ಪ್ರಯಾಣವನ್ನು ನವೆಂಬರ್ 10 ರ ಸಂಜೆ ಪೂರ್ವ ಚೀನಾದ ಸುಝೌ (Suzhou) ನಗರದಿಂದ ಪ್ರಾರಂಭಿಸಿತು. ಇದು ಹೆದ್ದಾರಿಗಳು ಮತ್ತು ನಗರದ ಬೀದಿಗಳನ್ನು ದಾಟಿ, ನವೆಂಬರ್ 13 ರಂದು ಶಾಂಘೈನ ಐತಿಹಾಸಿಕ ಬಂಡ್ (Bund) ಪ್ರದೇಶವನ್ನು ತಲುಪಿತು. ಈ ರೋಬೋಟ್ ಒಟ್ಟು 106.286 ಕಿಲೋಮೀಟರ್ ದೂರವನ್ನು ಕ್ರಮಿಸಿದೆ.
ದಾಖಲೆಯ ವಿವರಗಳು
ಈ ರೋಬೋಟ್ ಅನ್ನು ಅಗಿಬಾಟ್ ಇನ್ನೊವೇಶನ್ (ಶಾಂಘೈ) ಟೆಕ್ನಲಾಜಿಸ್ (Agibot Innovation (Shanghai) Technology Co., Ltd). ಕಂಪನಿಯು ನಿರ್ಮಿಸಿದೆ. ಅಗಿಬಾಟ್ A2 ರೋಬೋಟ್ ಏಪ್ರಿಲ್ ಮತ್ತು ಮೇ 2025 ರ ನಡುವೆ ಹಲವು ಗಂಟೆಗಳ ನಿರಂತರ ಕಾರ್ಯಾಚರಣೆಯ ಸಮಯದಲ್ಲಿ ಅದು ಬೀಳುವುದನ್ನು ತಪ್ಪಿಸಲು ವಿಶೇಷವಾಗಿ ಮಾರ್ಪಾಡು ಮಾಡಲಾಗಿತ್ತು. ಈ ರೋಬೋಟ್ ಆಗಸ್ಟ್ 17 ರಂದು 40°C ಗೆ ಸಮೀಪಿಸುತ್ತಿರುವ ಅಧಿಕ ತಾಪಮಾನದಲ್ಲಿ 24 ಗಂಟೆಗಳ ಕಾಲ ಸ್ವತಂತ್ರವಾಗಿ ನಡಿಗೆಯನ್ನು (autonomous walk) ಯಶಸ್ವಿಯಾಗಿ ಪೂರ್ಣಗೊಳಿಸಿತ್ತು, ಇದನ್ನು ಆನ್ಲೈನ್ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು.
“100 ಕಿ.ಮೀ ಗಿಂತ ಹೆಚ್ಚು ನಡಿಗೆಯ ಈ ಗಿನ್ನೆಸ್ ವಿಶ್ವ ದಾಖಲೆ (GWR) ಸವಾಲು ಅಗಿಬಾಟ್ A2 ರೋಬೋಟ್ಗೆ ಮಹತ್ವದ ಪ್ರಗತಿಯನ್ನು ಖಚಿತಪಡಿಸುತ್ತದೆ,” ಎಂದು ಗಿನ್ನೆಸ್ ವಿಶ್ವ ದಾಖಲೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಂಚಾರ ನಿಯಮ ಪಾಲಿಸಿದ ರೋಬೋಟ್
ರೋಬೋಟ್ ತಯಾರಕ ಕಂಪನಿಯು ‘X’ ನಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅದರ ಈ ಎರಡು-ಕಾಲಿನ ರೋಬೋಟ್ ತನ್ನ ನಿರಂತರ 106.286 ಕಿಲೋಮೀಟರ್ ಪ್ರಯಾಣದ ಸಮಯದಲ್ಲಿ ಸಂಚಾರ ನಿಯಮಗಳಿಗೆ ಬದ್ಧವಾಗಿ ಸಂಚರಿಸಿದೆ. ಈ ಸಾಧನೆಯನ್ನು ಗುರುವಾರ ಮೊದಲನೆಯದೆಂದು ಪ್ರಮಾಣೀಕರಿಸಲಾಗಿದೆ.
ಅಗಿಬಾಟ್ ಪ್ರಕಟಿಸಿದ ವೀಡಿಯೊ ತುಣುಕುಗಳು ಅಗಿಬಾಟ್ A2 ರೋಬೋಟ್ ಸೈಕ್ಲಿಸ್ಟ್ಗಳು ಮತ್ತು ಸ್ಕೂಟರ್ಗಳ ಪಕ್ಕದಲ್ಲಿ ರಸ್ತೆಯ ಉದ್ದಕ್ಕೂ ನಡೆಯುವುದನ್ನು ತೋರಿಸುತ್ತವೆ.
ಗ್ರಾಹಕ ಸೇವೆಗೆ ವಿನ್ಯಾಸ
ಕಂಪನಿಯು ನೀಡಿರುವ ಮಾಹಿತಿ ಪ್ರಕಾರ, ಅಗಿಬಾಟ್ A2 ರೋಬೋಟ್ ಅನ್ನು ಗ್ರಾಹಕ ಸೇವಾ (customer service) ಕೆಲಸಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಚಾಟ್ ಕಾರ್ಯ ಮತ್ತು ಲಿಪ್ ರೀಡಿಂಗ್ (lip-reading) ಸಾಮರ್ಥ್ಯಗಳನ್ನು ಹೊಂದಿದೆ.
ಕಳೆದ ಆಗಸ್ಟ್ನಲ್ಲಿ ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ವಿಶ್ವದ ಪ್ರಥಮ ಮಾನವರೂಪಿ ರೋಬೋಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಅಲ್ಲಿ ಬ್ಯಾಸ್ಕೆಟ್ಬಾಲ್ನಿಂದ ಹಿಡಿದು ಸ್ಪರ್ಧಾತ್ಮಕ ಸ್ವಚ್ಛತೆವರೆಗೆ ವಿವಿಧ ವಿಭಾಗಗಳಲ್ಲಿ 500ಕ್ಕೂ ಹೆಚ್ಚು “ಕ್ರೀಡಾಪಟುಗಳು” ಭಾಗವಹಿಸಿದ್ದರು.


