ಬೆಂಗಳೂರು: ಬಾಲ್ಯದ ಗೆಳೆಯನನ್ನು ಹುಟ್ಟುಹಬ್ಬದ ದಿನವೇ ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗಲೂರು ಸಂಸ್ಥೆಯಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ಗೆದ್ದಲಹಳ್ಳಿ ನಿವಾಸಿ ವರುಣ್ ಕೋಟ್ಯಾನ್ (24) ಹತ್ಯೆಯಾದ ದುರ್ದೈವಿ. ಈ ಕೊಲೆ ಕೃತ್ಯ ಎಸಗಿದವ ಬೆಂಗಳೂರಿನಲ್ಲಿ ಝೋಮ್ಯಾಟೋದಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತ ದಿವೇಶ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಯುವಕರಿಬ್ಬರು ಉಡುಪಿ ಮೂಲದವರು.
ವರುಣ್ ಹುಟ್ಟುಹಬ್ಬದ ನಿಮಿತ್ತ ಶುಕ್ರವಾರ ರಾತ್ರಿ ಬಂದಿದ್ದ ದಿವೇಶ್, ರಾತ್ರಿ ಪಾರ್ಟಿ ಬಳಿಕ ಮನೆಯಲ್ಲೇ ಇದ್ದ. ಆಗ ಗೆಳತಿ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.
ವರುಣ್ ಕೋಟ್ಯಾನ್ ಹಾಗೂ ಆರೋಪಿ ದಿವೇಶ್ ಬಾಲ್ಯ ಸ್ನೇಹಿತರು ಮಾತ್ರವಲ್ಲ ಇಬ್ಬರು ಬೆಂಗಳೂರಿನ
ಗೆದ್ದಲಹಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಈ ಗೆಳೆಯರಿಗೆ ಬಾಲ್ಯದ ಸ್ನೇಹಿತೆ ಸನಾ ಎಂಬಾಕೆ ಇದ್ದು, ಕೆಲ ದಿನಗಳಿಂದ ದಿವೇಶ್ ಜತೆ ಆತ್ಮೀಯವಾಗಿದ್ದಳು. ಈ ವಿಚಾರ ತಿಳಿದು ಗೆಳೆಯನ ಮೇಲೆ ವರುಣ್ ಅಸಮಾಧಾನಗೊಂಡಿದ್ದ.
ವರುಣ್ ಮತ್ತು ದಿವೇಶ್ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಯುವತಿ ಮೊದಲು ವರುಣ್ ನನ್ನು ಪ್ರೀತಿಸುತ್ತಿದ್ದಳು. ನಂತರ ದಿವೇಶ್ ಮೇಲೆ ಆಕೆಗೆ ಪ್ರೀತಿ-ಪ್ರೇಮ ಕುದುರಿದೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದ ಶುಕ್ರವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಇದೇ ವಿಷಯವಾಗಿ ಆಗಾಗ ಅವರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ದಿವೇಶ್, ವರುಣನ ಹುಟ್ಟುಹಬ್ಬದ ಆಚರಣೆಗೆ ಶುಕ್ರವಾರ ರಾತ್ರಿ ಗೆಳತಿ ಸನಾ, ದಿವೇಶ್ ಹಾಗೂ ದೀಕ್ಷಿತ್ ಸೇರಿದ್ದರು. ನಂತರ ಈ ನಾಲ್ವರು ಸ್ನೇಹಿತರು ಮನೆಯಿಂದ ಹೊರ ಹೋಗಿ ಪಾರ್ಟಿ ಮುಗಿಸಿ ಮತ್ತೆ ಮನೆಗೆ ಬಂದಿದ್ದರು.
ಹತ್ಯೆ ವೇಳೆ ಮನೆಯಲ್ಲೇ ಇದ್ದ ಗೆಳತಿ ತನ್ನ ಸ್ನೇಹದ ವಿಚಾರವಾಗಿ ಬಾಲ್ಯದ ಗೆಳೆಯರು ಪರಸ್ಪರ ಬಡಿದಾಡಿಕೊಳ್ಳುವ ವೇಳೆ ಅದೇ ಮನೆಯಲ್ಲಿ ನಿದ್ರೆ ಮಾಡುತ್ತಿದ್ದಳು. ಹತ್ಯೆ ವಿಚಾರ ತಿಳಿದ ಕೂಡಲೇ ಭೀತಿಗೊಂಡು ತನ್ನ ಮನೆಗೆ ತೆರಳಿದ್ದಳು. ಬಳಿಕ ಆಕೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆಕೆ ನಿರ್ದೋಷಿ ಎಂಬುದು ಗೊತ್ತಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಾಗ ಇದೇ ವಿಷಯಕ್ಕೆ ಜಗಳ: ಘಟನೆ ನಡೆದ ದಿನ
ಒಂದು ರೂಮ್ ನಲ್ಲಿ ಸ್ನೇಹಿತೆ ಮಲಗಿದರೆ, ಮತ್ತೊಂದು ರೂಮ್ನಲ್ಲಿ ಮೂವರು ಗೆಳೆಯರು ನಿದ್ರೆ ಜಾರಿದ್ದರು. ಆ ವೇಳೆ ಸ್ನೇಹಿತೆ ವಿಚಾರವಾಗಿ ವರುಣ್ ಮತ್ತು ದಿವೇಶ್ ಮಧ್ಯೆ ಜಗಳ ಶುರುವಾಗಿದೆ.
ಕೊನೆಗೆ ಮತ್ತೊಬ್ಬ ಸ್ನೇಹಿತ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದ್ದ. ಮುಂಜಾನೆ ನಿದ್ರೆಯಿಂದ ಎದ್ದಾಗ ಮತ್ತೆ ವರುಣ್ ಹಾಗೂ ದಿವೇಶ್ ಮಧ್ಯೆ ಜಗಳ ಆರಂಭವಾಗಿದೆ. ನೀನು ಮಾಟ-ಮಂತ್ರ ಮಾಡಿ ಆಕೆಯನ್ನು ವಶೀಕರಣ ಮಾಡಿಕೊಂಡಿದ್ದೀಯಾ ಎಂದು ದಿವೇಶ್ ಕೂಗಾಡಿದ್ದಾನೆ.
ಆಗ ತಳ್ಳಾಟ, ನೂಕಾಟ ಮಾಡಿಕೊಂಡು ಮನೆಯಿಂದ ಇಬ್ಬರು ಹೊರಗೆ ಬಂದಿದ್ದಾರೆ. ಈ ಹಂತದಲ್ಲಿ ಸಿಟ್ಟಿಗೆದ್ದ ದಿವೇಶ್, ಮನೆ ಮುಂದೆ ಬಿದ್ದಿದ್ದ ಸಿಮೆಂಟ್ ಇಟ್ಟಿಗೆ ತೆಗೆದುಕೊಂಡು ವರುಣ್ ಮೇಲೆ ಹಲ್ಲೆ ನಡೆಸಿದ್ದಾನೆ.
ಆಗ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ವರುಣ್ ಕೊನೆಯುಸಿರೆಳೆದಿದ್ದಾನೆ. ಹತ್ಯೆ ಬಳಿಕ ಪರಾರಿಯಾಗಲು ಯತ್ನಿಸಿದ್ದ ದಿವೇಶ್ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.