ನವದೆಹಲಿ:
ದೇಶದಲ್ಲಿ ಅಸ್ತಿತ್ವದಲ್ಲಿರುವ ನಗರಗಳ ಮೇಲಿನ ಜನಸಂಖ್ಯೆಯ ಹೊರೆ ತಗ್ಗಿಸಲು ಎಂಟು ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆಯು ಕೇಂದ್ರದ ಪರಿಗಣನೆಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ದೇಶದಲ್ಲಿ ಹೊಸ ನಗರಗಳನ್ನು ಅಭಿವೃದ್ಧಿಪಡಿಸಬೇಕು ಎಂದು 15ನೇ ಹಣಕಾಸು ಆಯೋಗವು ತನ್ನ ವರದಿಯೊಂದರಲ್ಲಿ ಶಿಫಾರಸು ಮಾಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂ. ಬಿ. ಸಿಂಗ್ ಹೇಳಿದ್ದಾರೆ.
`ಅರ್ಬನ್ 20′ ಎಂಬ ಹೆಸರಿನ ಸಭೆಯ ನಂತರ ಸಿಂಗ್ ಪಿಟಿಐ ಜೊತೆ ಮಾತನಾಡಿದರು.
ಹಣಕಾಸು ಆಯೋಗದ ಶಿಫಾರಸಿನ ನಂತರ, 26 ಹೊಸ ನಗರಗಳಿಗಾಗಿ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಿದ್ದು, ಪರಿಶೀಲನೆಯ ನಂತರ ಎಂಟು ಹೊಸ ನಗರಗಳನ್ನು ಅಭಿವೃದ್ಧಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಹೊಸ ನಗರಗಳನ್ನು ಎಲ್ಲಿ ನಿರ್ಮಿಸಲಾಗುತ್ತದೆ, ಯಾವಾಗ ನಿರ್ಮಿಸಲಾಗುತ್ತದೆ ಎಂಬ ವಿಷಯವನ್ನು ಸರ್ಕಾರವು ಸೂಕ್ತ ಸಮಯದಲ್ಲಿ ಪ್ರಕಟಿಸಲಿದೆ ಎಂದು ಅವರು ಹೇಳಿದರು.
ಈಗಿರುವ ನಗರಗಳು ನಾಗರಿಕರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗದ ಕಾರಣ ನಾವು ದೇಶದಲ್ಲಿ ಹೊಸ ನಗರಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ. ಅಸ್ತಿತ್ವದಲ್ಲಿರುವ ನಗರಗಳು ಅವ್ಯವಸ್ಥಿತ ರೀತಿಯಲ್ಲಿ ವಿಸ್ತರಣೆಗೊಳ್ಳುತ್ತಿವೆ. ಇದು ಮೂಲಭೂತ ಯೋಜನೆಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಸಿಂಗ್ ಹೇಳಿದರು.
ಹೊಸ ನಗರವನ್ನು ಅಭಿವೃದ್ಧಿಪಡಿಸಿದ್ದೇ ಆದರೆ, ಕನಿಷ್ಠ 200 ಕಿ.ಮೀ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂದು ಅವರು ಹೇಳಿದರು.
ಹೊಸ ನಗರಗಳ ಸ್ಥಾಪನೆಗೆ ಆರ್ಥಿಕ ಮಾರ್ಗಸೂಚಿಯನ್ನು ಅಂತಿಮಗೊಳಿಸಿಲ್ಲ. ಆದರೆ, ಕೇಂದ್ರ ಸರ್ಕಾರವು ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.