ಬೆಳಗಾವಿ: ನಗರದ ಚವಾಟ್ ಗಲ್ಲಿಯಲ್ಲಿ ಶುಕ್ರವಾರ ಹೋಳಿ ಆಚರಣೆ ವೇಳೆ ಜೈ ಜೈ ಮಹಾರಾಷ್ಟ್ರ ಮಾಝಾ (ನನ್ನ ಮಹಾರಾಷ್ಟ್ರಕ್ಕೆ ಜಯವಾಗಲಿ) ಎಂಬ ಮಹಾರಾಷ್ಟ್ರ ನಾಡಗೀತೆಗೆ ಯುವಜನರು ಕುಣಿದ ಪ್ರಕರಣಕ್ಕೆ ಸಂಬಂಧಿಸಿ ಕೊನೆಗೂ ಮೂವರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಳಿ ಕಾರ್ಯಕ್ರಮದ ಆಯೋಜಕರಾದ ಚವಾಟ್ ಗಲ್ಲಿಯ ಸುನೀಲ ಜಾಧವ, ಡಾಲ್ಟಿ ಮಾಲೀಕ ಗೋಜಗಾ ಗ್ರಾಮದ ವೈಭವ ಗಾವಡೆ, ಡಾಲ್ಟಿ ಆಪರೇಟರ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ಏಕೀಕಣ ಸಮಿತಿ (ಎಂಇಎಸ್) ನಾಯಕರು ಆಯೋಜಿಸಿದ್ದ ಹೋಳಿಯಲ್ಲಿ ಡಿ.ಜೆ ಸೌಂಡ್ಸಿಸ್ಟಮ್ ಬಳಸಿ ಇದೇ ಹಾಡನ್ನು ಪದೇಪದೇ ಕೇಳಿಸಲಾಗಿತ್ತು. ಈ ಬಗ್ಗೆ ಕನ್ನಡಿಗರು ಅಕ್ರೋಶ ವ್ಯಕ್ತಪಡಿಸಿದ್ದರು.